ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೋ

ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೋ
ಪೆರ್ಮಯಿಂದ ದೇಹವ ನಂಬಬೇಡಿ ಕಾಣಿರೋ

ಅಟ್ಟ ಅಡುಗೆ ಉಣಲು ಬಿಡನು
ಕೊಟ್ಟ ಸಾಲ ಕೇಳಬಿಡನು
ಪೆಟ್ಟಿಗೆಯೊಳಿದ್ದ ಚಿನ್ನವ
ತೊಟ್ಟೆನೆಂದರೆ ಯಮನು ಬಿಡನು

ಅಕ್ಕನಿಲ್ಲಿ ಕರೆಯಲಿಲ್ಲ
ಮಕ್ಕಳನ್ನು ಪಡೆಯಲಿಲ್ಲ
ದು:ಖಗೊಂಡ ಕಣ್ಣೀರನು
ಉಕ್ಕಿಸಿದರೆ ಬಿಡನು ಯಮನು

ಪೇಳ್ವೆ ನೆಂಟರಿಂಗೆ ಕರೆದು
ಬೇಳೆ ಬೆಲ್ಲವನ್ನು ತಂದು
ನಾಳೆ ಮಗನ ಮದುವೆಯೆಂದು
ತಾಳು ಎಂದರೆ ಯಮನು ಬಿಡನು

ಮಾಳಿಗೆ ಮನೆಯಿರಲಿ
ಜಾಳಿಗೆ ತುಂಬ ಹೊನ್ನಿರಲಿ
ಆಳು ಮಂದಿ ಶಾನೆಯಿರಲಿ
ಕಾಲನು ತಾ ಬೆನ್ನ ಬಿಡನು

ಅರ್ತಿಯಿಂದ ಸಂಸಾರವ
ವ್ಯರ್ಥವಾಗಿ ನೆಚ್ಚಬೇಡಿ
ಕರ್ತು ಪುರಂದರವಿಠಲನ್ನ
ಭಕ್ತಿಯೆಂದ ಭಜಿಸಿರೋ


ಧರ್ಮಕ್ಕೆ ಕೈ ಬಾರದೀ ಕಾಲ

ಧರ್ಮಕ್ಕೆ ಕೈ ಬಾರದೀ ಕಾಲ ಪಾಪ
ಕರ್ಮಕ್ಕೆ ಮನ ಸೋಲುವಿದೀ ಕಾಲ


ದಂಡ ದ್ರೋಹಕೆ ಉಂಟು, ಪುಂಡು ಪೋಕರಿಗುಂಟು
ಹೆಂಡತಿ ಮಕ್ಕಳಿಗಿಲ್ಲೀ ಕಾಲ
ದಿಂಡೇರಿಗುಂಟು ಜಗಭಂಡರಿಗುಂಟು
ಅಂಡಲೆವರಿಗಿಲ್ಲವೀ ಕಾಲ


ಮತ್ತೆ ಸುಳ್ಳರಿಗುಂಟು ನಿತ್ಯ ಹಾದರಕುಂಟು
ಉತ್ತಮರಿಗಿಲ್ಲವೀ ಕಾಲ
ತೊತ್ತೇರಿಗುಂಟು ತಾಟಕಿಗುಂಟು
ಹೆತ್ತತಾಯಿಗಿಲ್ಲವೀ ಕಾಲ


ಹುಸಿ ದಿಟವಾಯಿತು ರಸ ಕಸವಾಯಿತು
ಸೊಸೆ ಅತ್ತೆಯ ದಂಡಿಸೋದೀ ಕಾಲ
ಬಿಸಜಾಕ್ಷ ಪುರಂದರವಿಠಲನ ಮನದಲ್ಲಿ
ಸ್ತುತಿಸುವವರಿಗಿಲ್ಲವೀ ಕಾಲ


ಧರಣಿಗೆ ದೊರೆಯೆಂದು ನಂಬಿದೆ

ಧರಣಿಗೆ ದೊರೆಯೆಂದು ನಂಬಿದೆ, ಇಂಥ
ಪರಮಲೋಭಿ ಎಂಬುದರಿಯೆ ಶ್ರೀಹರಿಯೆ

ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ
ಓಡಿ ನೀರೊಳು ಸೇರಿಕೊಂಡೆ ಬೇಗ
ಹೇಡಿಯ ತೆರೆದಲಿ ಮೋರೆಯ ತೋರದೆ
ಓಡಿ ಅರಣ್ಯದಿ ಮೃಗಗಳ ಸೇರ್ದೆ

ಬಡವರ ಬಿನ್ನಹ ಲಾಲಿಸದೆ ಹಲ್ಲ
ಕಡು ಕೋಪದಲಿ ತೆರೆದಂಜಿಸಿದೆ
ತಡೆಯದೆ ಭಿಕ್ಷುಕನಾದರೆ ಬಿಡರೆಂದು
ಕೊಡಲಿಯ ಪಿಡಿದು ಕೋಡಗಹಿಂಡ ಕಾಯ್ದೆ

ಉತ್ತಮನೆಂದರೆ ಮತ್ತೆ ಚೋರನಾದೆ
ಬತ್ತಲೆ ನಿಂತೆ ತೇಜಿಯನೇರಿದೆ
ಎತ್ತಹೋದರು ಬಿಡೆ ಮತ್ತೆ ನಿನ್ನನು ದೇವ
ಚಿತ್ತಜಜನಕ ಶ್ರೀ ಪುರಂದರವಿಠಲ


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ದೇವ ಬಂದ ನಮ್ಮ ಸ್ವಾಮಿ ಬಂದನೊ


ದೇವ ಬಂದ ನಮ್ಮ ಸ್ವಾಮಿ ಬಂದನೊ
ದೇವರ ದೇವ ಶಿಖಾಮಣಿ ಬಂದನೊ

ಉರಗಶಯನ ಬಂದ ಗರುಡಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ

ಮಂದರೋದ್ಧರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೊ

ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದನೊ

ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯ ಫಲದ ಶ್ರೀ ಲಕ್ಷ್ಮೀರಮಣ ಬಂದನೊ

ನಿಗಮಗೋಚರ ಬಂದ ನಿತ್ಯತೃಪ್ತನು ಬಂದ
ನಗೆಮುಖ ಪುರಂದರವಿಠಲ ಬಂದನೊ


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ದೇವಕಿ ಕಂದ ಮುಕುಂದ

ದೇವಕಿ ಕಂದ ಮುಕುಂದ

ನಿಗಮೋದ್ಧಾರ ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ

ಶಂಖ ಚಕ್ರಧರ ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ

ಮಕರಕುಂಡಲಧರ ಮೋಹನವೇಷ
ರುಕುಮಿಣಿ ವಲ್ಲಭ ಪಾಂಡವ ಪೋಷ

ಕಂಸಮರ್ದನ ಕೌಸ್ತುಭಾಭರಣ
ಹಂಸವಾಹನ ಪೂಜಿತ ಚರಣ

ವರ ವೇಲಾಪುರ ಚೆನ್ನಪ್ರಸನ್ನ
ಪುರಂದರವಿಠಲ ಸಕಲ ಗುಣಪೂರ್ಣ



ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ದೂರು ಮಾಡುವರೇನೆ ರಂಗಯ್ಯನ

ದೂರು ಮಾಡುವರೇನೆ ರಂಗಯ್ಯನ
ದೂರು ಮಾಡುವರೇನೆ


ದೂರು ಮಾಡುವರೇನೆ ಚೋರನೆಂದಿವನನು
ಮೂರು ಲೋಕಕೆ ಮುದ್ದು ತೋರೋ ರಂಗಯ್ಯನ


ನಂದಗೋಕುಲದಲಿ ಮಂದೆ ಗೋವುಗಳ
ಮುಂದೆ ಕೊಳಲನೂದಿ ಚಂದದಿ ಬರುವನ


ಗೊಲ್ಲರ ಮನೆಗಳ ಕಳ್ಳತನದಿ ಪೊಕ್ಕು
ಗುಲ್ಲು ಮಾಡುತಲವರ ಗಲ್ಲ ಕಚ್ಚುವನೆಂದು


ಕಾಮದಿಂದಲಿ ನಿನ್ನ ಕಳವಳತನಕಾಗಿ
ಶ್ಯಾಮಸುಂದರ ಶ್ರೀ ಪುರಂದರವಿಠಲನ

ದುರಿತಗಜ ಪಂಚಾನನ

ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ ಕಾಯಬೇಕೆನ್ನ

ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ

ಅರಸು ಮುಟ್ಟಲು ದಾಸಿ ರಂಭೆಯು ದೇವ
ಪರುಷ ಮುಟ್ಟಲು ಲೋಹ ಹೊನ್ನು ಗೋವಿಂದ

ಹೆಸರುಳ್ಳ ನದಿಗಳನೊಳಗೊಂಬ ಜಲಧಿಯು
ಬಿಸುಡುವನೆ ಕಾಲುಹೊಳೆಗಳನು ಗೊವಿಂದ

ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಮರೆಹೋಗಲೇಕೆ ಗೋವಿಂದ

ಸ್ಮರಣೆಮಾತ್ರಕಜಾಮಿಳಗೆ ಮುಕ್ತಿಯನಿತ್ತೆ
ವರದ ಪುರಂದರವಿಠಲ ಗೋವಿಂದ


ದಾಸನ ಮಾಡಿಕೊ ಎನ್ನ

ದಾಸನ ಮಾಡಿಕೊ ಎನ್ನ ಇಷ್ಟು
ಘಾಸಿ ಮಾಡುವರೇನೊ ಕರುಣಾಸಂಪನ್ನ

ದುರುಳ ಬುದ್ದಿಗಳೆಲ್ಲ ಬಿಡಿಸೋ ನಿನ್ನ
ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ
ಚರಣ ಸೇವೆ ಎನಗೆ ಕೊಡಿಸೊ
ಅಭಯ ಕರಪುಷ್ಪ ಎನ್ನಯ ಶಿರದೊಳು ಮುಡಿಸೊ

ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಿಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ

ಮೊರೆ ಹೊಕ್ಕವರ ಕಾಯ್ವ ಬಿರುದು ನೀ
ಮರೆಯದೆ ರಕ್ಷಣೆ ಮಾಡೆನ್ನ ಪೊರೆದು
ದುರಿತ ರಾಶಿಗಳೆಲ್ಲ ತರಿದು ಸ್ವಾಮಿ
ಪುರಂದರವಿಠಲ ಕರುಣದಿ ಕರೆದು

ದಾರಿಯೇನಿದಕೆ ಮುರಾರಿ

ದಾರಿಯೇನಿದಕೆ ಮುರಾರಿ ನೀ
ಕರುಣದಿ ಕೈ ಹಿಡಿಯದಿದ್ದರೆ

ಕಷ್ಟ ಕರ್ಮಂಗಳು ಎಷ್ಟಾದರು ಮಾಳ್ಪೆ
ಇಷ್ಟೂ ಲಕ್ಷಿಪನಲ್ಲ ಗುರುಹಿರಿಯರ
ದುಷ್ಟರ ಸಂಗವ ಬಹಳ ಮಾಡಿದರಿಂದ
ಶ್ರೇಷ್ಠರ ಸೇವೆಯೆಂದರೆ ಆಗದೆನಗೆ

ಪರರ ದೂಷಣೆಮಾಡಿ ಪರರ ಪಾಪಂಗಳ
ಪರಿಪರಿಯಲಿ ಆಡಿಕೊಂಬೆ ನಾನು
ಹರಿನಾಮಾಮೃತವನು ಹೇಳಿ ಕೇಳದೆ ಹಾಳು
ಹರಟೆಯಿಂದ ಹೊತ್ತು ಕಳೆಯುವ ಎನಗೆ

ಪಾತಕ ಕರ್ಮಗಳ ಮಾಡಿದಜಾಮಿಳಗೆ
ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ
ನೂತನವೇಕಿನ್ನು ಸೂರ್ಯಾಂತರ್ಗತ ಜಗ
ಜ್ಯೋತಿಯಾದ ಶ್ರೀ ಪುರಂದರವಿಠಲ

ದಾರಿ ಯಾವುದಯ್ಯ ವೈಕುಂಠಕೆ

ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ

ದಾರಿ ಯಾವುದಯ್ಯ ದಾರಿ ತೋರಿಸಯ್ಯ ಆ-
ಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ

ಬಲು ಭವದನುಭವದಿ ಕತ್ತಲೆಯೊಳು
ಬಲು ಅಂಜುತೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ
ಹೊಳೆವಂಥ ದಾರಿಯ ತೋರೊ ನಾರಾಯಣ

ಪಾಪ ಪೂರ್ವದಲ್ಲಿ ಮಾಡಿದುದಕೆ
ಲೇಪವಾಗಿದೆ ಕರ್ಮ
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಶ್ರೀಪತಿ ಸಲಹೆನ್ನ ಭೂಪನಾರಾಯಣ

ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ
ನಿನ್ನ ದಾಸನಾದೆನೊ
ಪನ್ನಗಶಯನ ಶ್ರೀ ಪುರಂದರವಿಠಲ
ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ದಾನವನ ಕೊಂದದ್ದಲ್ಲ ಕಾಣಿರೊ

ದಾನವನ ಕೊಂದದ್ದಲ್ಲ ಕಾಣಿರೊ
ಗಾನ ವಿನೋದಿ ನಮ್ಮ ತೊರವೆಯ ನರಸಿಂಹ

ಅಚ್ಚಪುರುಷನೆಂಬ ಸ್ವಚ್ಛರತ್ನ ಒಡಲೊಳು
ಬಿಚ್ಚಿ  ಬೆದಕಿ ನೋಡಿದರೆ ಇನ್ನೆಷ್ಟು ಇದ್ದಾವೊ ಎಂದು

ನೆಂಟತನವು ಬೆಳೆಯಬೇಕೆಂದು ಕರುಳ ಕೊರಳೊಳು
ಗಂಟು ಹಾಕಿಕೊಂಡನೆಷ್ಟೊ ದೇಹ ಸಂಬಂಧದಿಂದ

ತೊರವೆಯ ನಾರಸಿಂಹ ಪ್ರಹ್ಲಾದ ಪಾಲಕ
ಉರಿಮೋರೆ ದೈವ ನಮ್ಮ ಪುರಂದರವಿಠಲ


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ದಯಮಾಡೊ ರಂಗ ದಯಮಾಡೊ

ದಯಮಾಡೊ ರಂಗ ದಯಮಾಡೊ

ದಯಮಾಡೊ ನಿನ್ನ ದಾಸನು ನಾನೆಂದು

ಹಲವು ಕಾಲದಿ ನಿನ್ನ ಹಂಬಲು ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ

ಇಹಪರಗತಿ ನೀನೆ ಇಂದಿರಾರಮಣ
ಭಯವೇಕೊ ನೀನಿರಲು ಭಕ್ತರಭಿಮಾನಿ

ಕರಿರಾಜವರದನೆ ಕಾಮಿತ ಫಲದ
ಪುರಂದರವಿಠಲನೆ ಹರಿಸಾರ್ವಭೌಮ


1. ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

ತೋಳು ತೋಳು ತೋಳು ಕೃಷ್ಣ ತೋಳನ್ನಾಡೈ

ತೋಳು ತೋಳು ತೋಳು ಕೃಷ್ಣ ತೋಳನ್ನಾಡೈ
ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈ

ಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋಳನ್ನಾಡೈ
ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋಳನ್ನಾಡೈ
ನೆಲುವು ನಿಲುಕದೆಂದೊರಳ ತಂದಿಡುವನೆ ತೋಳನ್ನಾಡೈ
ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋಳನ್ನಾಡೈ

ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋಳನ್ನಾಡೈ
ಕಟ್ಟಿದ ಕರಡೆಯ ಕರುವೆಂದೆಳೆವನೆ ತೋಳನ್ನಾಡೈ
ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋಳನ್ನಾಡೈ
ಬಟ್ಟಲ ಹಾಲನು ಕುಡಿದು ಕುಣಿವನೇ ತೋಳನ್ನಾಡೈ

ಅಂಬೆಗಾಲಿಲೊಂದೊರಳನ್ನೆಳೆವನೆ ತೋಳನ್ನಾಡೈ
ತುಂಬಿದ ಬಂಡಿಯ ಮುರಿಯಲೊದ್ದವನೆ ತೋಳನ್ನಾಡೈ
ಕಂಬದಿಂದಲವತರಿಸಿದವನೆ ನೀ ತೋಳನ್ನಾಡೈ
ನಂಬಿದವರನು ಹೊರೆವ ಕೃಷ್ಣ ತೋಳನ್ನಾಡೈ

ಕಾಲಕೂಟದ ವಿಷವ ಕಲಕಿದ ತೋಳನ್ನಾಡೈ
ಕಾಳಿಂಗನ ಹೆಡೆಯನು ತುಳಿದ ತೋಳನ್ನಾಡೈ
ಕಾಳೆಗದಲಿ ದಶಕಂಠನ ಮಡುಹಿದ ತೋಳನ್ನಾಡೈ
ಶಾಲಕ ವೈರಿಯೆ ಕರುಣಿಗಳರಸನೆ ತೋಳನ್ನಾಡೈ

ನಖದಿಂದಲಿ ಹಿರಣ್ಯಕನನು ಸೀಳಿದ ತೋಳನ್ನಾಡೈ
ಸುಖವನಿತ್ತು ಪ್ರಹ್ಲಾದನ ಕಾಯ್ಡವ ತೋಳನ್ನಾಡೈ
ವಿಕಳಗೊಳಿಸಿದೆ ಗೋಪಿಯರೆಲ್ಲರ ತೋಳನ್ನಾಡೈ
ರುಕುಮಿಣಿಪತಿ ಸಿರಿಪುರಂದರವಿಟ್ಠಲ ತೋಳನ್ನಾಡೈ


 1- ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

2- ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

ತೇಲಿಸೋ ಇಲ್ಲ ಮುಳುಗಿಸೋ

ತೇಲಿಸೋ ಇಲ್ಲ ಮುಳುಗಿಸೋ ನಿನ್ನ
ಕಾಲಿಗೆ ಬಿದ್ದೆನೊ ಪರಮ ಕೃಪಾಳೋ

ಸತಿಸುತ ಧನದಾಸೆ ಎಂಬಂತೆ ಮೋಹದಿ
ಹಿತದಿಂದ ಅತಿ ನೊಂದು ಬೆಂಡಾದೆನೊ
ಗತಿ ಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ-
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ

ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ
ಶರಧಿಯೊಳಗೆ ಬಿದ್ದು ಮುಳುಗಿದೆನೊ
ಸ್ಥಿರವಲ್ಲ ದೇಹವು ನೆರೆ ನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೊ ಹರಿಯೆ

ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೋದೆನೊ ಭಕ್ತಿ ರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸಂಗವಿತ್ತು ಪಾಲಿಸೊ ಹರಿಯೆ



ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

ತುಂಗೆ ಮಂಗಳ ತರಂಗೆ

ತುಂಗೆ ಮಂಗಳ ತರಂಗೆ

ಹರಿಸರ್ವಾಂಗ ಜಯ ಜಯತು ಜಯ ಜಯ ತುಂಗಭದ್ರೆ

ಆದಿಯಲ್ಲೊಬ್ಬ ದೈತ್ಯ ಮೇದಿನಿಯ ಕದ್ದೊಯ್ದು
ಸಾಧಿಸುತ್ತಿರಲವನ ಬೆನ್ನಟ್ಟಿ ಬಿಡದೆ
ಛೇದಿಸುತಲವನ ಭೂಮಿಯನೆತ್ತಿ ಕಾಯ್ದಂಥ
ಆದಿವರಾಹನ ದಾಡೆಗಳಿಂದ ಬಂದೆ

ಜಲವೆಲ್ಲ ಹರಿಮಯ ಶಿಲೆಯಲ್ಲ ಶಿವಮಯ
ಮಳಲು ಮಿಟ್ಟೆಗಳೆಲ್ಲ ಮಣಿಯ ಮಯವು
ಬೆಳೆದಿಪ್ಪ ದರ್ಭೆಗಳು ಸಾಕ್ಷಾತ್ತು ಬ್ರಹ್ಮಮಯ
ನಳಿನ ನಾಳವು ಸರ್ವ ವಿಷ್ಣುಮಯ

ಇದೆ ವೃಂದಾವನ ಇದೆ ಕ್ಷೀರಾಂಬುಧಿ
ಇದೆ ವೈಕುಂಠಕೆ ಸರಿಯೆಂದೆನಿಸಿದೆ
ಇದೆ ಬದರಿಕಾಶ್ರಮ ಇದೆ ವಾರಾಣಾಸಿಗೆ
ಅಧಿಕ ಫಲವನ್ನೀವ ದೇವಿ

ಧರೆಗೆ ದಕ್ಷಿಣ ವಾರಾಣಾಸಿ ಎಂದೆನಿಸಿದೆ
ಪರಮ ಪವಿತ್ರೆ ಪಾವನ ಚರಿತೆ ನಿನ್ನ
ಸ್ವರಣೆ ಮಾತ್ರದಿ ಕೋಟಿಜನ್ಮದಘವನು ಕಳೆವ
ಸರಿದು ಸಾಯುಜ್ಯ ಫಲವೀವ ದೇವಿ

ಪರಮ ಭಕ್ತ ಪ್ರಹ್ಲಾದಗೊಲಿದು ಬಂದು
ನರಸಿಂಹ ಕ್ಷೇತ್ರವೆಂದೆನಿಸಿ ಮೆರೆದೆ
ಧರೆಯೊಳಧಿಕ ವರ ಕೊಡಲಿಪುರದಲ್ಲಿ
ವರದ ಪುರಂದರವಿಠಲನಿರಲು ಬಂದೆ

ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

ತಾಳು ತಾಳೆಲೊ ರಂಗಯ್ಯ

ತಾಳು ತಾಳೆಲೊ ರಂಗಯ್ಯ ನೀ
ತಾಳು ತಾಳೆಲೊ ಕೃಷ್ಣಯ್ಯ

ನಾಳೆ ನಮ್ಮನೆಗೆ ಬಂದರೆ ನಿನ್ನ
ಕಾಲ ಕಂಭಕೆ ಕಟ್ಟಿ ಪೇಳುವೆ ಗೋಪಿಗೆ

ದೊರೆಗಳ ಮಗನೆಂಬುದದೇನೊ ಆ-
ತುರದಿ ಮನೆ ಪೊಕ್ಕ ಪರಿಯೇನೊ
ದುರುಳಬುದ್ಧಿ ನಿನಗೆ ತರವೇನೊ ಹಿಂದೆ
ತಿರುಗಿ ಬೇಡ್ಯುಂಡದ್ದು ಮರೆತ್ಯೇನೊ

ಚಿಕ್ಕ ಮಕ್ಕಳು ಹೋದರು ಎಂದು ನೀ ಬಂದು
ಕಕ್ಕುಲತೆಯ ಮಾಡುವರೇನೊ
ಸಿಕ್ಕಿದ ಗೋಪಾಲ ಹಿಡಿಯೆಂದರೆ ನೀ
ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ

ಕಟ್ಟಿದಾಕಳ ಮೊಲೆಗಳನುಂಡು ಕರು
ಬಿಟ್ಟು ಹೇಳುವುದೇನೆಲೊ ರಂಗ
ಸೃಷ್ಟಿಗೊಡೆಯ ಶ್ರೀ ಪುರಂದರವಿಠಲ ನೀ
ಕಟ್ಟಲ್ಲಿ ನಿಂತ ಕಾರಣವೇನೊ ರಂಗ

ತಾಳ ಬೇಕು ತಕ್ಕ ಮೇಳ ಬೇಕು



ತಾಳ ಬೇಕು ತಕ್ಕ ಮೇಳ ಬೇಕು ಶಾಂತ

ವೇಳೆ ಬೇಕು ಗಾನವನ್ನು ಕೇಳಬೇಕೆಂಬುವರಿಗೆ

ಯತಿಪ್ರಾಸವಿರಬೇಕು ಗತಿಗೆ ನಿಲ್ಲಿಸಬೇಕು
ರತಿಪತಿಪಿತನೊಳು ಅತಿ ಪ್ರೇಮವಿರಬೇಕು

ಗಳ ಶುದ್ಧವಿರಬೇಕು ತಿಳಿದು ಪೇಳಲು ಬೇಕು
ಕಳವಳ ಬಿಡಬೇಕು ಕಳೆಮುಖವಿರಬೇಕು

ಅರಿತವರಿರಬೇಕು ಹರುಷ ಹೆಚ್ಚಲಿ ಬೇಕು
ಪುರಂದರವಿಠಲನೆ ಪರದೈವವೆನಬೇಕು


ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ


ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ

ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೊ ಕರುಣ

ಅಳಗಿರಿಯಿಂದಲಿ ಬಂದಾ ಸ್ವಾಮಿ ಅಂಜನಗಿರಿಯಲಿ ನಿಂದ
ಕೊಳಲೂದೊ ಧ್ವನಿ ಚಂದಾ ನಮ್ಮ ಕುಂಡಲರಾಯ ಮುಕುಂದ

ಬೇಟೆಯಾಡುತ ಬಂದಾ ಸ್ವಾಮಿ ಬೆಟ್ಟದ ಮೇಲೆ ನಿಂದಾ
ನೀಟುಗಾರ ಗೋವಿಂದಾ ಅಲ್ಲಿ ಜೇನು ಸಕ್ಕರೆಯನು ತಿಂದಾ

ಮೂಡಲಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತಾ ಈರೇಳು ಲೋಕಕನಂತ

ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ
ಬೇಡಿದ ವರಗಳನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ

ಅಪ್ಪವ ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯರ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ

ಬಗೆಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯಾನ್ನ
ಬಗೆಬಗೆ ಸೊಬಗು ಮೋಹನ್ನ ನಮ್ಮ ನಗೆಮುಖದ ಪ್ರಸನ್ನ

ಕಾಶೀ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದೆ ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೇ ಚೆಂದ

ಎಲ್ಲ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದರಿಗೆ ಉದ್ದಂಡ ಶಿವನ ಬಿಲ್ಲ ಮುರಿದ ಪ್ರಚಂಡ

ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದ ಗಂಟು ಕಟ್ಟಿ
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆಟ್ಟಿ

ದಾಸರ ಕಂಡರೆ ಪ್ರಾಣ ತಾ ಧರೆಯೊಳಗಧಿಕ ಪ್ರವೀಣ
ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯಕಲ್ಯಾಣ

ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕೈಯ
ಏಸು ಮಹಿಮಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ

ಚಿತ್ತವಧಾನ ಪರಾಕು ನಿನ್ನ ಚಿತ್ತದ ದಯವೊಂದೆ ಸಾಕು
ಸತ್ವವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು

ಅಲ್ಲಲ್ಲಿ ಪರಿಷೆಯ ಗುಂಪು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳದಿಂಪು

ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ

ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೇ ಪಾನ
ಕೋಪತಾಪಗಳ ನಿಧಾನ ನಮ್ಮ ಪುರಂದರವಿಠಲನ ಧ್ಯಾನ

ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

ತಾಸು ಬಾರಿಸುತಿದೆ ಕೇಳಿ ಹರಿದಾಸರೆಲ್ಲ

ತಾಸು ಬಾರಿಸುತಿದೆ ಕೇಳಿ ಹರಿದಾಸರೆಲ್ಲ

ಶ್ರೀಶನ ಭಜನೆಯ ಮಾಡದ ಮನುಜನ
ಆಯುಷ್ಯ ವೃಥಾ ಹೋಯಿತು ಎಂದು

ಹಾಸು ಮಂಚ ಸುಪ್ಪತ್ತಿಗೆಯಲ್ಲಿ ಹಗಲು ಇರುಳು
ಹೇಸರಕತ್ತೆಯಂತೆ ಹೊರಳಿ ಸ್ತ್ರೀಯರ ಕೂಡಿ
ಬೇಸರದೆ ನಿತ್ಯ ಉರುಳಿ ಈ ಪರಿಯಿಂದಲಿ ಮಾ-
ನುಷ ಆಯುವು ವೃಥಾ ಹೋಯಿತು ಹೋಯಿತು ಎಂದು

ವಾರ್ಧಕ್ಯ ಬಾಲ್ಯ ಕೆಲವು ಕಾಲ ವಿವೇಕವಿಲ್ಲದ
ಬುದ್ದಿಮಾಂದ್ಯ ಕೆಲವು ಕಾಲ ಅಜ್ಞಾನದಿಂದ
ನಿದ್ರೆಯಿಂದಲಿ ಅತಿಲೋಲ ಈ ಪರಿ-
ಯಿಂದಲಿ ಕಾಲನ ಮನೆಯು ಸಮೀಪವಾಯಿತು ಆಯಿತು ಎಂದು

ಕಂಡ ಕಂಡ ವಿಷಯವ ಕಾಮಿಸಿ ಕಷ್ಟವ ಪಡದೆಲೆ
ತಾಂಡವ ಶ್ರೀಕೃಷ್ಣನ ಭಜಿಸಿ
ಪುಂಡರೀಕಾಕ್ಷನ ಪುರಾಣಪುರುಷನ
ಪುರಂದರವಿಠಲನ ಭಜಿಸಿ ಬದುಕು ಎಂದು ಢಂಢಣಾ ಢಣರೆಂದು

ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ


ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ ತಾರೇ ಬಿಂದಿಗೆಯ


ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ

ರಾಮನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ
ಕಾಮಿನಿಯರ ಕೂಡೆ ಏಕಾಂತವಾಡೇನು ತಾರೇ ಬಿಂದಿಗೆಯ

ಗೋವಿಂದಯೆಂಬುವ ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ
ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೆ ಬಿಂದಿಗೆಯ

ಬಿಂದುಮಾಧವನ ಘಟ್ಟಕ್ಕೆ ಹೋಗುವೆ ತಾರೇ ಬಿಂದಿಗೆಯ ಪು-
ರಂದರವಿಠಲಗೆ ಅಭಿಷೇಕ ಮಾಡುವೆ ತಾರೇ ಬಿಂದಿಗೆಯ

ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

ತಾಂಬೂಲವ ಕೊಳ್ಳೋ ತಮನಮರ್ದನನೇ

ತಾಂಬೂಲವ ಕೊಳ್ಳೋ ತಮನಮರ್ದನನೇ ಕಮಲವದನನೇ

ಅಂಬುಜಾಕ್ಷಿ ಮೋದದಿ ಮಡಚಿ ಕೊಡುತಾಳೆ

ಸಂಪಿಗೆಣ್ಣೆ ಅತ್ತರು ಚಂದನದೆಣ್ಣೆ
ಈ ಪರಿಪರಿ ವಿಧ ಪರಿಮಳದ ಎಣ್ಣೆ
ಕೆಂಪು ಕೇಸರಿ ಗಂಧ ಕಸ್ತೂರಿಯು
ಚಂಪಕ ಮೊದಲಾದ ಪುಷ್ಪವ ಮುಡಿಯೊ

ಚಿಕ್ಕಣಿ ಅಡಿಕೆ ಕೇದಿಗೆ ಕಾಚು ಕೂಡಿದ ಏ-
ಲಕ್ಕಿ ಜಾಯಿಕಾಯಿ ಲವಂಗ ಜಾಯಪತ್ರೆಯು
ಮೌಕ್ತಿಕದ ಸುಣ್ಣ ಕರ್ಪೂರ ಬೆರಸಿ ತಾ
ರುಕ್ಮಿಣಿದೇವಿಯು ಸಮರ್ಪಿಸುತಾಳೆ

ಮಂಚವ ಹಾಕಿದೆ ಮಲ್ಲಿಗೆ ಹೂವ ತರಿಸಿದೆ
ಮುಂಚೆ ಬಂದು ಮಲಗಯ್ಯ ಮಿಂಚುತಲಿ
ಚಂಚಲಾಕ್ಷಿಯು ನಿನ್ನ ಇದಿರು ನೋಡುತಾಳೆ
ಪಂಚಬಾಣನಯ್ಯ ಶ್ರೀಪುರಂದರವಿಠಲ

ತನುವ ನೀರೊಳಗದ್ದಿ ಫಲವೇನು

ತನುವ ನೀರೊಳಗದ್ದಿ ಫಲವೇನು ತನ್ನ
ಮನದಲ್ಲಿ ದೃಢಭಕ್ತಿಯಿಲ್ಲದ ಮನುಜರು

ದಾನ ಧರ್ಮಗಳನ್ನು ಮಾಡುವುದೇ ಸ್ನಾನ
ಜ್ಞಾನತತ್ತ್ವಂಗಳ ತಿಳಿವುದೆ ಸ್ನಾನ
ಹೀನ ಪಾಶಂಗಳ ಹರಿವುದೆ ಸ್ನಾನ
ಧ್ಯಾನದಿ ಮಾಧವನ ನೋಡುವುದೆ ಸ್ನಾನ

ಗುರುಗಳ ಶ್ರೀಪಾದ ತೀರ್ಥವೆ ಸ್ನಾನ
ಹಿರಿಯರ ದರ್ಶನ ಮಾಡುವುದೇ ಸ್ನಾನ
ಕರೆದು ಅತಿಥಿಗೆ ಅನ್ನ ಇಡುವುದೆ ಸ್ನಾನ
ನರಹರಿ ಚರಣವ ನಂಬುವುದೇ ಸ್ನಾನ

ದುಷ್ಟರ ಸಂಗವ ಬಿಡುವುದೆ ಸ್ನಾನ
ಶಿಷ್ಟರ ಸಹವಾಸ ಮಾಡುವುದೆ ಸ್ನಾನ
ಸೃಷ್ಟಿಯೊಳಗೆ ಸಿರಿ ಪುರಂದರವಿಠಲನ
ಮುಟ್ಟು ಭಜಿಸಿ ಪುಣ್ಯ ಪಡೆವುದೆ ಸ್ನಾನ

ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

ತನಗಿಲ್ಲದಾ ವಸ್ತುವೆಲ್ಲಿದ್ದರೇನು

ತನಗಿಲ್ಲದಾ ವಸ್ತುವೆಲ್ಲಿದ್ದರೇನು
ತನ್ನ ಮನಕೆ ಬಾರದ ಹೆಣ್ಣು ಮೆಚ್ಚಿ ಬಂದರೇನು

ಆದರಣೆಯಿಲ್ಲದೂಟವಮೃತಾನ್ನವಾದರೇನು
ವಾದಿಸುವ ಸತಿಸುತರು ಇದ್ದು ಫಲವೇನು
ಕ್ರೋಧವನು ಬೆಳೆಸುವ ಸೋದರಿಗರಿದ್ದರೇನು
ಮಾದಿಗನ ಮನೆಯಲ್ಲಿ ಮದುವೆಯಾದರೇನು

ಸಾವಿಗಿಲ್ಲದೌಷಧಿಯು ಸಂಚಿ ತುಂಬ ಇದ್ದರೇನು
ದೇವಕೀಸುತನ ಹೊಗಳದ ಕವಿತ್ವವೇನು
ಹೇವವಿಲ್ಲದ ಗಂಡು ಹೆಚ್ಚಾಗಿ ಬಾಳಿದರೇನು
ಹಾವಿನ ಹೆಡೆಯೊಳಗೆ ಹಣವಿದ್ದರೇನು

ಸನ್ಮಾನ ಮಾಡದ ದೊರೆ ಸಾವಿರಾರು ಕೊಟ್ಟರೇನು
ತನ್ನ ತಾ ತಿಳಿಯದ ಜ್ಞಾನವೇನು
ಚೆನ್ನಾಗಿ ಪುರಂದರವಿಠಲನ ನೆನೆಯದವ
ಸಂನ್ಯಾಸಿಯಾದರೇನು ಸಂಸಾರಿಯಾದರೇನು

ಡೊಂಕು ಬಾಲದ ನಾಯಕರೆ

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಗಿ ನೋಡುವಿರಿ

ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರವಿಟ್ಠಲರಾಯನ ಈ ಪರಿ
ಮರೆತು ಸದಾ ನೀವು ಚರಿಸುವಿರಿ

ಈ ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಡಂಗುರವ ಸಾರಿರಯ್ಯ

ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು ಭೂ-
ಮಂಡಲಕ್ಕೆ ಪಾಂಡುರಂಗವಿಟ್ಠಲ ಪರದೈವವೆಂದು

ಹರಿಯು ಮುಡಿದ ಹೂವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ

ಒಡಲ ಜಾಗಟೆ ಮಾಡಿ ನುಡಿವ ನಾಲಿಗೆ ಪಿಡಿದು
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ

ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀ ಪುರಂದರವಿಟ್ಠಲ ಪರದೈವವೆಂದು

ಈ ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿ