ಎಂಥಾ ಚೆಲುವಗೆ ಮಗಳನು ಕೊಟ್ಟನು


ಎಂಥಾ ಚೆಲುವಗೆ ಮಗಳನು ಕೊಟ್ಟನು
ಗಿರಿರಾಜನು ನೋಡಮ್ಮಮ್ಮಾ

ಕಂತುಹರ ಶಿವ ಚೆಲುವನೆನ್ನುತ
ಮೆಚ್ಚಿದನು ನೋಡಮ್ಮಮ್ಮಾ

ಮೋರೆ ಐದು ಮೂರು ಕಣ್ಣು
ವಿಪರೀತವ ನೋಡಮ್ಮಮ್ಮಾ

ಕೊರಳೊಳು ರುಂಡಮಾಲೆಯ
ಧರಿಸಿದ ಉರಗಭೂಷಣನ ನೋಡಮ್ಮಮ್ಮಾ

ತಲೆಯೆಂಬೋದು ನೋಡಿದರೆ ಜಡೆ
ಹೊಳೆಯುತಿದೆ ನೋಡಮ್ಮಮ್ಮಾ

ಹಲವು ಕಾಲದ ತಪಸಿ ರುದ್ರನ
ಮೈ ಬೂದಿಯ ನೋಡಮ್ಮಮ್ಮಾ

ಭೂತ ಪ್ರೇತ ಪಿಶಾಚಿಗಳೆಲ್ಲ
ಪರಿವಾರವು ನೋಡಮ್ಮಮ್ಮಾ

ಈತನ ನಾಮವು ಒಂದೇ ಮಂಗಳ
ಮುಪ್ಪುರಹರನ ನೋಡಮ್ಮಮ್ಮಾ

ಮನೆಯೆಂಬುವುದು ಸ್ಮಶಾನವು ನೋಡೆ
ಗಜ ಚರ್ಮಾಂಬರವಮ್ಮಮ್ಮಾ

ಹಣವೊಂದಾದರು ಕೈಯೊಳಗಿಲ್ಲ
ಕಪ್ಪರವನು ನೋಡಮ್ಮಮ್ಮಾ

ನಂದಿವಾಹನ ನೀಲಕಂಠನ
ನಿರ್ಗುಣನ ನೋಡಮ್ಮಮ್ಮಾ

ಇಂದಿರೆರಮಣ ಶ್ರೀ ಪುರಂದರವಿಠಲನ
ಪೊಂದಿದವನ ನೋಡಮ್ಮಮ್ಮಾ

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ



ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ
ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ

ಪವಿತ್ರೋದಕದಿ ಪಾದ ತೊಳೆವೆನೆಂತೆಂದರೆ
ಪಾವನವಾದ ಗಂಗೆ ಪಾದೋದ್ಭವೆ
ನವಕುಸುಮವ ಸಮರ್ಪಿಸುವೆನೆಂದರೆ ಉದು-
ಭವಿಸಿಹನು ಅಜ ನಿನ್ನ ಪೊಕ್ಕಳ ಪೂವಿನಲಿ

ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತ
ದ್ವೀಪಂಗಳೆಲ್ಲವನು ಬೆಳಗುತಿಹವೋ
ಆಪೋಶನವನಾದರೀವೆನೆಂತೆಂಬೆನೆ
ಆಪೋಶನವಾಯಿತೇಳು ಅಂಬುಧಿಯು

ಕಾಣಿಕೆಯಿತ್ತಾದರು ಕೈಮುಗಿವೆನೆಂಬೆನೆ
ರಾಣಿವಾಸವು ಸಿರಿದೇವಿ ನಿನಗೆ
ಮಾಣದೆ ಮನದೊಳು ನಿನ್ನ ನಾಮ ಸ್ಮರಣೆ
ಧ್ಯಾನವನು ದಯ ಮಾಡೊ ಪುರಂದರವಿಠಲ

ಊರಿಗೆ ಬಂದರೆ ದಾಸಯ್ಯ ನಮ್ಮ


ಊರಿಗೆ ಬಂದರೆ ದಾಸಯ್ಯ ನಮ್ಮ
ಕೇರಿಗೆ ಬಾ ಕಂಡ್ಯ ದಾಸಯ್ಯ

ಕೇರಿಗೆ ಬಂದರೆ ದಾಸಯ್ಯ ಗೊಲ್ಲ
ಕೇರಿಗೆ ಬಾ ಕಂಡ್ಯ ದಾಸಯ್ಯ

ಕೊರಳೊಳು ವನಮಾಲೆ ಧರಿಸಿದವನೆ ಕಿರು
ಬೆರಳಲಿ ಬೆಟ್ಟವನೆತ್ತಿದನೆ
ಇರುಳು ಹಗಲು ನಿನ್ನ ಕಾಣದೆ ಇರಲಾರೆ
ಮರುಳು ಮಾಡಿದಂಥ ದಾಸಯ್ಯ

ಕಪ್ಪು ವರ್ಣದ ದಾಸಯ್ಯ ಕಂ-
ದರ್ಪನ ಪಿತನೆಂಬೊ ದಾಸಯ್ಯ
ಅಪ್ಪಿಕೊಂಡು ನಮ್ಮ ಮನಸಿಗೆ ಬಂದರೆ
ಅಪ್ಪನ ಕೊಡುವೆನು ದಾಸಯ್ಯ

ಮುಂಗೈ ಮುರಾರಿ ದಾಸಯ್ಯ ಚೆಲ್ವ
ಪೊಂಗೊಳಲೂದುವ ದಾಸಯ್ಯ
ಹಾಂಗೇ ಪೋಗದಿರು ದಾಸಯ್ಯ ಹೊ-
ನ್ನುಂಗುರ ಕೊಡುವೆನು ದಾಸಯ್ಯ

ಸಣ್ನ ನಾಮದ ದಾಸಯ್ಯ ನಮ್ಮ
ಸದನಕ್ಕೆ ಬಾ ಕಂಡ್ಯ ದಾಸಯ್ಯ
ಸದನಕೆ ಬಂದರೆ ದಾಸಯ್ಯ ಮಣೀ-
ಸರವನು ಕೊಡುವೆನು ದಾಸಯ್ಯ

ಸಿಟ್ಟು ಮಾಡದಿರು ದಾಸಯ್ಯ ಸಿರಿ
ಪುರಂದರವಿಟ್ಠಲ ದಾಸಯ್ಯ
ರಟ್ಟು ಮಾಡದಿರು ದಾಸಯ್ಯ ತಂ-
ಬಿಟ್ಟು ಕೊಡೂವೆನು ದಾಸಯ್ಯ

ಊಟಕ್ಕೆ ಬಂದೆವು ನಾವು ನಿಮ್ಮ


ಊಟಕ್ಕೆ ಬಂದೆವು ನಾವು ನಿಮ್ಮ
ಆಟ ಪಾಟವ ಬಿಟ್ಟು ಅಡುಗೆ ಮಾಡಮ್ಮ

ಕತ್ತಲಿಟ್ಟಾವಮ್ಮ ಕಣ್ಣು ಬಾಯಿ
ಒತ್ತಿ ಬರುತಲಿದೆ ಕೈಕಾಲು ಝಮ್ಮು
ಹೊತ್ತು ಹೋಗಿಸಬೇಡವಮ್ಮ ಒಂದು
ತುತ್ತಾದರು ಇತ್ತು ಸಲಹು ನಮ್ಮಮ್ಮ

ಒಡಲೊಳಗೆ ಉಸಿರಿಲ್ಲ ಒಂದು
ಕ್ಷಣವಾದರೆ ಜೀವ ನಿಲ್ಲುವುದಿಲ್ಲ
ಮಡಿದರೆ ದೋಷ ತಟ್ಟುವುದು ಒಂದು
ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು

ಹೊನ್ನರಾಶಿಯ ತಂದು ಸುರಿಯೆ ಕೋಟಿ
ಕನ್ನಿಕೆಯರ ತಂದು ಧಾರೆಯನೆರೆಯೆ
ಅನ್ನದಾನಕ್ಕಿನ್ನು ಸರಿಯೆ ಪ್ರ-
ಸನ್ನ ಪುರಂದರವಿಟ್ಠಲ ದೊರೆಯೆ.

ಉರಿಗಂಜೆ ಸೆರೆಗಂಜೆ ಶರೀರದ ಭಯಕಂಜೆ


ಉರಿಗಂಜೆ ಸೆರೆಗಂಜೆ ಶರೀರದ ಭಯಕಂಜೆ
ಹಾಬಿಗಂಜೆ ಚೇಳಿಗಂಜೆ ಕತ್ತಿಯ ಧಾರೆಗಂಜೆ
ಇನ್ನೊಂದಕ್ಕಂಜುವೆ ಇನ್ನೊಂದಕ್ಕಳುಕುವೆ
ಪರಧನ ಪರಸತಿ ಎರಡಕ್ಕಂಜುವೆನಯ್ಯ
ಹಿಂದೆ ಕೌರವ ರಾವಣರೇನಾಗಿ ಪೋದರು
ಮುಂದೆನ್ನ ಸಲಹಯ್ಯ ಪುರಂದರವಿಠಲ

ಉದರ ವೈರಾಗ್ಯವಿದು ನಮ್ಮ


ಉದರ ವೈರಾಗ್ಯವಿದು ನಮ್ಮ
ಪದುಮನಾಭನಲಿ ಲೇಶ ಭಕುತಿಯಿಲ್ಲ

ಉದಯಕಾಲದಲೆದ್ದು ಗಡಗಡ ನಡುಗುತ
ನದಿಯಲಿ ಮಿಂದೆನೆಂದು ಹಿಗ್ಗುತಲಿ
ಮದ ಮತ್ಸರ ಕ್ರೋಧ ಒಳಗೆ ತುಂಬಿಟಗೊಂಡು
ಬದಿಯಲ್ಲಿದ್ದವರಿಗಾಶ್ಚರ್ಯ ತೋರುವುದು

ಕಂಚುಗಾರನ ಬಿಡಾರದಂದದಿ
ಕಂಚು ಹಿತ್ತಾಳೆ ಪ್ರತಿಮೆಗಳ ನೆರಹಿ
ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ
ವಂಚನೆಯಿಂದಲಿ ಪೂಜೆ ಮಾಡುವುದು

ಕರದಲಿ ಜಪಮಣಿ ಬಾಯಲಿ ಮಂತ್ರವು
ಅರಿವೆಯ ಮುಸುಕನು ಮೋರೆಗೆ ಹಾಕಿ
ಪರಸತಿಯರ ಗುಣ ಮನದಲಿ ಸ್ಮರಿಸುತ
ಪರಮ ವೈರಾಗ್ಯಶಾಲಿ ಎಂದೆನಿಸುವುದು

ಬೂಟಕತನದಲಿ ಬಹಳ ಭಕುತಿ ಮಾಡಿ
ದಿಟನೀತ ಸರಿಯಾರಿಲ್ಲೆನಿಸಿ
ನಾಟಕ ಸ್ತ್ರೀಯಂತೆ ಬಯಲ ಡಂಭವ ತೋರಿ
ಊಟದ ಮಾರ್ಗದ ಜ್ಞಾನವಿದಲ್ಲದೆ

ನಾನು ಎಂಬುದ ಬಿಟ್ಟು ಜ್ಞಾನಿಗಳಡನಾಡಿ
ಏನಾದರು ಹರಿ ಪ್ರೇರಣೆಯೆಂದು
ಧ್ಯಾನಿಸಿ ಮೌನದಿ ಪುರಂದರವಿಠಲನ
ಕಾಣದೆ ಮಾಡಿದ ಕಾರ್ಯಗಳೆಲ್ಲವು

ಈಗ ಮಾಡಲೊ ರಾವಧ್ಯಾನವ ನೀ


ಈಗ ಮಾಡಲೊ ರಾವಧ್ಯಾನವ ನೀ
ಮೂಗನಾಗಿರಬೇಡ ಎಲೆ ಮಾನವ

ಕಾಲನ ದೂತರು ಕರೆವಾಗ ನೀ
ಕುಲಗೆಟ್ಟು ಕಣ್ಣು ಬಿಡುವಾಗ
ನಾಲಿಗೆ ಸೆಳಕೊಂಡು ಜ್ಞಾನಗೆಟ್ಟಿರುವಾಗ
ನೀಲವರ್ಣನ ಧ್ಯಾನ ಬರುವುದೇನಯ್ಯ

ಸತಿಸುತರೆಂಬ ಸಂದಣಿಯೊಳು ನೀ
ಮತಿಭ್ರಷ್ಟನಾಗಿ ಮನದೊಳು
ಸತತ ಶ್ರೀ ಲಕ್ಷ್ಮೀಪತಿಯ ನೆನೆದರೆ ಸ-
ದ್ಗತಿ ಸನ್ಮಾರ್ಗ ಪಾರಂಪದವೀವನಯ್ಯ

ಯಮದೂತರು ಬಂದು ಎಳೆದಾಗ ನೀ
ನವೆಯುತ್ತ ಹೊತ್ತು ಕಳೆವಾಗ
ಸಮದರ್ಶಿ ಪುರಂದರವಿಠಲನ ನಾಮವಾ
ಸಮಯಕ್ಕೆ ಒದಗಿ ತಾ ಬರುವುದೇನಯ್ಯ

ಇಷ್ಟು ಪಾಪಗಳ ಮಾಡಿದ್ದೆ ಸಾಕು


ಇಷ್ಟು ಪಾಪಗಳ ಮಾಡಿದ್ದೆ ಸಾಕು
ಸೃಷ್ಟೀಶನೆ ಎನ್ನನುದ್ಧರಿಸಬೇಕು

ಒಡಲ ಕಿಚ್ಚಿಗೆ ಪರರ ಕಡು ನೋಯಿಸಿದೆ
ಕೊಡದೆ ಅನ್ಯರ ಋಣವನಪಹರಿಸಿದೆ
ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ
ಹಡೆದ ತಾಯಿಯ ಕೂಡೆ ಹಗೆ ಮಾಡಿದೆ

ಸ್ನಾನ ಸಂಧ್ಯಾದಿಗಳ ಮಾಡದಲೆ ಮೈಗೆಟ್ಟೆ
ಜ್ಞಾನ ಮಾರ್ಗವನಂತು ಮೊದಲೆ ಬಿಟ್ಟೆ
ಏನು ಪೇಳಲಿ ಪರರ ಮಾನಿನಿಗೆ ಮನಸಿಟ್ಟೆ
ಶ್ವಾನ ಸೂಕರರಂತೆ ಹೊರೆದೆ ಹೊಟ್ಟೆ

ವ್ರತ ನೇಮ ಉಪವಾಸ ಮಾಡಲಿಲ್ಲ
ಅತಿಥಿಗಳಿಗನ್ನವನು ನೀಡಲಿಲ್ಲ
ಶ್ರುತಿ ಶಾಸ್ತ್ರ ಪೌರಾಣ ಕಥೆಗಳನು ಕೇಳಲಿಲ್ಲ
ವೃಥವಾಗಿ ಬಹುಕಾಲ ಗತವಾಯಿತಲ್ಲ

ಶುದ್ಧ ವೈಷ್ಣವ ಕುಲದಲುದ್ಭವಿಸಿದೆ ನಾನು
ಮಧ್ವಮತ ಸಿದ್ದಾಂತ ಪದ್ದತಿಗಳ
ಬುದ್ಧಿಪೂರ್ವಕ ತಿಳಿಯದುದ್ದಂಡ ಕಾಯವನು
ವೃದ್ಧಿ ಮಾಡಿದೆನಯ್ಯ ಉದ್ಧರಿಸು ಹರಿಯೆ

ತಂದೆ ತಾಯ್ಗಳ ಸೇವೆಯೊಂದುದಿನ ಮಾಡಲಿಲ್ಲ
ಮಂದಭಾಗ್ಯಗೆ ಭವಣೆ ತಪ್ಪಲಿಲ್ಲ
ಹಿಂದೆ ಮಾಡಿದ ದೋಷ ಒಂದುಳಿಯದರುಹಿದೆನೊ
ತಂದೆ ಪುರಂದರವಿಠಲ ಬಂದೆನ್ನ ಸಲಹೊ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ


ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ
ಫುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ

ಮರಣವನೊಲ್ಲೆ ಜನನವನೊಲ್ಲೆ
ದುರಿತ ಸಂಸಾರ ಕೋಟಲೆಯ ನಾನೊಲ್ಲೆ
ಕರುಣದಿ ಕರುಗಳ ಕಾಯ್ದ ಗೋವಳ ನಿನ್ನ
ಚರಣ ಕಮಲದ ಸ್ಮರಣೆಯೊಳಿರಿಸೆನ್ನ

ಬೆಂದೆ ಸಂಸಾರವೆಂಬೊ ಬೇನೆ ಮಧ್ಯದಲ್ಲಿ
ನೊಂದೆನೊ ನಾ ಬಹಳ ಕರೆಕರೆಯಲ್ಲಿ
ನಂದಗೋಪನ ಕಂದ ವೃಂದಾವನಪ್ರಿಯ
ಎಂದೆಂದೊ ನಿನ್ನ ಸ್ಮರಣೆಯೊಳಿರಿಸೆನ್ನ

ಪುತ್ರ ಮಿತ್ರ ಕಳತ್ರ ಬಂಧುಗಳೆಂಬ
ಕತ್ತಲೆಯೊಳು ಸಿಲುಕಿ ಕಡುನೊಂದೆನಲ್ಲ
ಮುಕ್ತಿದಾಯಕ ಉಡುಪಿಯ ಕೃಷ್ಣರಾಯ
ಭಕ್ತವತ್ಸಲ ಶ್ರೀ ಪುರಂದರವಿಠಲ

ಇರಬೇಕು ಹರಿದಾಸ ಸಂಗ ಇರಬೇಕು


ಇರಬೇಕು ಹರಿದಾಸ ಸಂಗ ಇರಬೇಕು
ಪರಮ ಜ್ಣಾನಿಗಳ ಸಂಗ ಸಂಪಾದಿಸಬೇಕು

ಅತಿ ಜ್ಣಾನಿಯಾಗಬೇಕು ಹರಿಕಥೆಯ ಕೇಳಬೇಕು
ಯತಿಗಳ ಪಾದಕ್ಕೆ ಎರಗಬೇಕು
ಸತಿಸುತರಿರಬೇಕು ಮಮತೆ ಬಿಟ್ಟಿರಬೇಕು
ಮತಿಯ ಬಿಡದೆ ಹರಿಯ ಪೂಜಿಪರ ಸಂಗ

ನಡೆ ಯಾತ್ರೆಯೆನಬೇಕು ನುಡಿ ನೇಮವಿರಬೇಕು
ಬಿಡದೆ ಹರಿಯ ಪೂಜೆ ಮಾಡಬೇಕು
ಅಡಿಗಡಿಗೆ ಶ್ರೀ ಹರಿಗಡ್ಡಬೀಳಲಿ ಬೇಕು
ಬಿಡದೆ ಹರಿಭಜನೆಯನು ಮಾಡುವರ ಸಂಗ

ಹರಿಯೆ ಪರನೆನಬೇಕು ಸುರಹರ ವಿರಂಚಿಗಳ
ಪರಿಯ ತಿಳಿಯಬೇಕು ತಾರತಮ್ಯದಿಂದ
ಅರಿಯದಿದ್ದರೆ ಗುರುಹಿಯರನು ಕೇಳಬೇಕು
ಪರಮಾನಂದದಿ ಓಲಾಡುವರ ಸಂಗ

ಷಟ್ಕರ್ಮ ಮಾಡಬೇಕು ವೈಷ್ಣವನೆನಬೇಕು
ವಿಷ್ಣುದಾಸರ ದಾಸನಾಗಬೇಕು
ದುಷ್ಟಸಂಗವ ಬಿಟ್ಟು ಶಿಷ್ಟಮಾರ್ಗವ ಪಿಡಿದು
ಎಷ್ಟು ಕಷ್ಟ ಬಂದರು ವಿಷ್ಣು ಭಜಕರ ಸಂಗ

ಏಕಾಂತವಿರಬೇಕು ಲೋಕವಾರ್ತೆ ಬಿಡಬೇಕು
ಲೋಕೈಕನಾಥನ ಭಜಿಸಬೇಕು
ಸಾಕು ಸಂಸಾರರೆಂದು ಕಕುಲಾತಿ ಬಿಡಬೇಕು
ಶ್ರೀಕಾಂತ ಪುರಂದರವಿಠಲದಾಸರ ಸಂಗ

ಇನ್ನೇಕೆ ಯಮನ ಬಾಧೆಗಳು ಎನ್ನ


ಇನ್ನೇಕೆ ಯಮನ ಬಾಧೆಗಳು ಎನ್ನ
ಜಿಹ್ವೆಯೊಳಗೆ ಹರಿನಾಮವೊಂದಿರಲು

ಪತಿತಪಾವನವೆಂಬ ನಾಮ ಅತಿ
ಹಿತದಿಂದ ಯತಿಗಳು ಸ್ತುತಿಸುವ ನಾಮ
ಕ್ರತುಕೋಟಿ ಫಲವೀವ ನಾಮ ಸ-
ದ್ಗತಿಗೆ ಸಾಧನವಹ ಅತಿಶಯ ನಾಮ

ಮುನ್ನೊಬ್ಬ ಪ್ರಹ್ಲಾದ ಸಾಕ್ಷಿ ಆ
ಕನ್ಯಾ ಶಿರೋಮಣಿ ದ್ರೌಪದಿ ಸಾಕ್ಷಿ
ಚಿಣ್ಣನೆಂದಜಾಮಿಳ ಸಾಕ್ಷಿ ದಿವ್ಯ
ಪುಣ್ಯ ಲೋಕವನಾಳ್ವ ಧ್ರುವರಾಯ ಸಾಕ್ಷಿ

ಹದಿನಾಲ್ಕು ಲೋಕವನಾಳ್ವ ಇವ
ಮದನಜನಕನಾಗಿ ಮುದದಿಂದ ಬಾಳ್ವ
ಪದುಮನಾಭನಾಗಿ ಇರುವ ನಮ್ಮ
ಸದರ ಪುರಂದರವಿಠಲನು ಕಾಯ್ವ

ಇನ್ನಾದರೂ ಹರಿಯ ನೆನೆ ಕಂಡ್ಯ ಮನುಜ


ಇನ್ನಾದರೂ ಹರಿಯ ನೆನೆ ಕಂಡ್ಯ ಮನುಜ

ಮುನ್ನಾದ ದುಃಖವು ನಿಜವಾಗಿ ತೊಲಗುವುದು

ಊರೂರ ನದಿಗಳಲಿ ಬಾರಿಬಾರಿಗೆ ಮುಳುಗಿ
ತೀರದಲಿ ಕುಳಿತು ನೀ ಹಣೆಗೆ ನಿತ್ಯ
ನೀರಿನಲಿ ಮುಟ್ಟಿಯನು ಕಲೆಸಿ ಬರೆಯುತ ಮೂಗು
ಬೇರನ್ನು ಹಿಡಿದು ಮುಸುಗಿಕ್ಕಲೇನುಂಟು

ನೂರಾರು ಕರ್ಮಂಗಳನು ದಂಭಕೆ ಮಾಡಿ
ಆರಾರಿಗೋ ಹಲವು ದಾನಕೊಟ್ಟು
ದಾರಿದ್ರ್ಯವನು ಪಡೆದು ತಿರಿದುಂಬುವುದಕೀಗ
ದಾರಿಯಾಯಿತೆ ಹೊರತು ಬೇರೆ ಫಲವುಂಟೆ

ನಾಡಾಡಿ ದೈವಗಳ ಚಿನ್ನ ಬೆಳ್ಳಿಗಳಿಂದ
ಮಾಡಿಕೊಂಡದರ ಪೂಜೆಯನು ಮಾಡೆ
ಕಾಡಕಳ್ಳರು ಬಂದು ಅವುಗಳನು ಕೊಂಡೊಯ್ಯೆ
ಮಾಡಿಕೊಂಡಿರ್ದುದಕೆ ಬಾಯ ಬಡುಕೊಳ್ಳುವೆಯೊ

ಮಗನ ಮದುವೆಯು ಎಂದು ಸಾಲವನು ನೀ ಮಾಡಿ
ಸುಗುಣಿಯೆನ್ನಿಸಿಕೊಳ್ಳಲು ವೆಚ್ಚ್ಹ ಮಾಡಿ
ಹಗರಣವ ಪಡಿಸಿದರೆ ಸಾಲಗಾರರು ಬಂದು
ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ

ಕೆಟ್ಟ ಈ ಬದುಕುಗಳ ಮಾಡಿದರೆ ಫಲವೇನು
ಥಟ್ಟನೆ ಶ್ರೀಹರಿಯ ಪಾದವನು ನಂಬು
ದಿಟ್ಟ ಶ್ರೀ ಪುರಂದರವಿಟ್ಠಲಯೆಂದೆನಲು
ಸುಟ್ಟುಹೋಗುವವಯ್ಯ ಕಷ್ಟರಾಶಿಗಳು

ಇದೇ ಸಮಯ ರಂಗ ಬಾರೆಲೊ


ಇದೇ ಸಮಯ ರಂಗ ಬಾರೆಲೊ
ಇದೇ ಸಮಯ ಕೃಷ್ಣ ಬಾರೆಲೊ

ಅತ್ತಿಗೆ ಲಕ್ಷಬತ್ತಿ ಶೀಲಳೋ
ಅಷ್ಟು ಆಗದೆ ಅವಳೇಳಳೋ
ಅತ್ತೆ ಪುರಾಣದಿ ಲೋಲಳೊ ಸರಿ
ಹೊತ್ತಿನ ವೇಳೆಗೆ ಬರುವಳೊ

ಮಾವ ಎನ್ನಲಿ ಅವಿಶ್ವಾಸಿಯೊ ಮ-
ದುವೆಯಾದ ಗಂಡ ಉದಾಸಿಯೊ
ಭಾವನು ಎನ್ನ ಸೇರ ಹೇಸಿಯೊ ನೀ-
ನೀವೇಳೆಗೆ ಬಂದರೆ ವಾಸಿಯೊ

ತಂದೆ ತಾಯ ಆಸೆ ಮಾಡೆನೊ ಎನ್ನ
ಕಂದನ ಮೇಲೆ ಮನಸಿಡೆನೊ
ಮಂದರಧರ ಪುರಂದರವಿಠಲ ನೀ
ಬಂದರೆ ಚರಣಸೇವೆ ಮಾಳ್ಪೆನೊ

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ


ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಪದುಮನಾಭನ ಪಾದಭಜನೆ ಸುಖವಯ್ಯ

ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಳು

ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಂಧುಜನರೊಳಗೆ

ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕು
ಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆ
ಮಧ್ವ ಮತಾಬ್ಧಿಯಲಿ ಮೀನಾಗಿ ಇರಬೇಕು
ಶುದ್ಧನಾಗಿರಬೇಕು ಕರಣತ್ರಯಂಗಳಲಿ

ವಿಷಯಭೋಗದ ತೃಣಕೆ ಉರಿಯಾಗಿ ಇರಬೇಕು
ನಿಶಿ ಹಗಲು ಶ್ರೀಹರಿಯ ಭಜಿಸಬೇಕು
ವಸುಧೆಯೊಳು ಪುರಂದರವಿಠಲನ ನಾಮವ
ಹಸನಾಗಿ ನೆನೆನೆನೆದು ಸುಖಿಯಾಗಬೇಕು


ಇಕ್ಕಲಾರೆ ಕೈ ಎಂಜಲು ಚಿಕ್ಕ


ಇಕ್ಕಲಾರೆ ಕೈ ಎಂಜಲು ಚಿಕ್ಕ
ಮಕ್ಕಳು ಅಳುತಾರೆ ಹೋಗೋ ದಾಸಯ್ಯ

ಮಡಕೆ ತೊಳೆಯತೇನೆ ಮನೆಯ ಸಾರಿಸುತೇನೆ
ಹುಡುಗರೊಬ್ಬರ ಕಾಣೆ ಹೋಗೊ ದಾಸಯ್ಯ
ತೊಡೆಯ ಮೇಲಿನ ಕೂಸು ಮೊಲೆಯನುಣ್ಣುತಲಿದೆ
ಹುಡುಗಾಟ ಮಾಡದೆ ಹೋಗೊ ದಾಸಯ್ಯ

ಅಟ್ಟದ ಮೇಲಿನ ಅಕ್ಕಿ ತೆಗೆಯಬೇಕು
ಹೊಟ್ಟೆ ನೋಯುತಲಿದೆ ಹೋಗೊ ದಾಸಯ್ಯ
ಮುಟ್ಟಾಗಿ ಇದ್ದೇನೆ ಮನೆಯೊಳಗಾರಿಲ್ಲ
ನಿಷ್ಠೂರ ಮಾಡದೆ ಹೋಗೊ ದಾಸಯ್ಯ

ವೀಸದ ಕಾಸಿಗೆ ದವಸವ ನಾ ತಂದೆ
ಕೂಸಿಗೆ ಸಾಲದು ಹೋಗೊ ದಾಸಯ್ಯ
ಆಸೆಕಾರ ನೀನು ದೋಷಕಾರಿ ನಾನು
ಶೇಷಾಚಲವಾಸ ಪುರಂದರವಿಠಲ

ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ


ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ
ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ


ಶೇಷಗಿರಿಯವಾಸ ಶ್ರೀಶ ದೋಷರಹಿತನೆ
ಏಸು ದಿನಕು ನಿನ್ನ ಪಾದದಾಸನು ನಾನೆ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ


ಕಮಲನಯನ ಕಾಮಜನಕ ಕರುಣವಾರಿಧೇ
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೇ


ಉರಗಶಯನ ಸುರರಿಗೊಡೆಯ ಸಿರಿಯ ರಮಣನೆ
ಶರಣಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆನಗೆ ಮುಕುತಿಯ ಪುರಂದರವಿಠಲನೆ

ಇಂಥ ಹೆಣ್ಣಿನ ನಾನೆಲ್ಲಿ ಕಾಣೆನು ಹೊಂತಕಾರಿ ಕಾಣಿರೊ


ಇಂಥ ಹೆಣ್ಣಿನ ನಾನೆಲ್ಲಿ ಕಾಣೆನು ಹೊಂತಕಾರಿ ಕಾಣಿರೊ

ಸಂತತ ಸುರರಿಗೆ ಪೀಯೂಷ ಉಣಿಸಿದ
ಪಂಕ್ತಿಯೊಳಗೆ ಪರವಂಚನೆ ಮಾಡಿದ

ಮಂದರಗಿರಿ ತಂದು ಸಿಂಧುವಿನೊಳಗಿಟ್ಟು
ಚಂದದಿ ಕಡೆದು ಅಮೃತವ ತೆಗೆದು
ಇಂದುಮುಖಿ ನೀ ಬಡಿಸೆಂದು ಕೊಟ್ಟರೆ
ದಂಧನಗಳ ಮಾಡಿ ದೈತ್ಯರ ವಂಚಿಸಿದ

ವಿಶ್ವಾಸದಿಂದಲಿ ಅಸುರಗೆ ವರವಿತ್ತು
ತ್ರಿಶೂಲಧರ ಓಡಿ ಬಳಲುತಿರೆ
ನಸುನಗುತಲಿ ಬಂದು ಭಸ್ಮಾಸುರಗೆ ಭೋಗ-
ದಾಸೆಯ ತೋರಿ ಭಸ್ಮವ ಮಾಡಿದ

ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ
ಬಸಿರಲಿ ಬ್ರಹ್ಮನ ಪಡೆದವಳಿವಳು
ಕುಸುಮನಾಭ ಶ್ರೀ ಪುರಂದರವಿಠಲನ
ಪೆಸರು ಪೊತ್ತಿಹಳು ಈ ಪೊಸ ಕನ್ನಿಕೆ

ಆವನಾವನು ಕಾಯ್ವ ಅವನಿಯೊಳಗೆ


ಆವನಾವನು ಕಾಯ್ವ ಅವನಿಯೊಳಗೆ
ಜೀವರಿಗೆ ಧಾತ್ರು ಶ್ರೀಹರಿ ಅಲ್ಲದೆ

ಆವ ತಂದೆಗಳು ಸಲಹಿದರು ಪ್ರಹ್ಲಾದನ್ನ
ಆವ ತಾಯಿಗಳು ಸಲಹಿದರು ಧ್ರುವನ್ನ
ಆವ ಸೋದರರು ಈಡೇರಿಸಿದರು ವಿಭೀಷಣನ್ನ
ಜೀವರಿಗೆ ಧಾತ್ರು ಶೀಹರಿಯಲ್ಲದೆ

ಆವ ಬಂಧುಗಳು ಸಲಹಿದರು ಗಜರಾಜನ್ನ
ಆವ ಪತಿಯಾದ ದ್ರೌಪದಿ ಕಾಲಕ್ಕೆ
ಆವಾವ ಸಖನಾದ ಪಾಂಡವರ ಸಮಯಕ್ಕೆ
ಜೀವರಿಗೆ ಧಾತ್ರು ಶೀಹರಿಯಲ್ಲದೆ

ಆವನಾಧಾರ ಅಡವಿಯೊಳಗಿದ್ದ ಮೃಗಗಳಿಗೆ
ಆವ ಪೋಷಕ ಗರ್ಭದಾ ಶಿಶುವಿಗೆ
ಆವ ಪಾಲಿಪ ಪಶು ಪಕ್ಷಿ ಮುಖ್ಯ ಜೀವರಿಗೆ
ದೇವ ಶ್ರೀಪುರಂದರವಿಟ್ಠಲನಲ್ಲದೆ

ಆರೇನು ಮಾಡುವರು ಅವನಿಯೊಳಗೆ


ಆರೇನು ಮಾಡುವರು ಅವನಿಯೊಳಗೆ

ಪೂರ್ವಜನ್ಮದ ಕರ್ಮ ಹಣೆಯಲ್ಲಿ ಬರೆದುದಕೆ

ಮಾಡಿದಡುಗೆಯು ಕೆಡಲು ಮನೆಯ ಗಂಡನು ಬಿಡಲು
ಕೂಡಿದ್ದ ಸತಿ ತಾನು ಕುಣಿಸ್ಯಾಡಲು
ಗೋಡೆಗೆ ಬರೆದ ಹುಲಿ ಘುಡಿಘುಡಿಸಿ ತಿನಬರಲು
ಆಡದಾ ಮಾತುಗಳ ಅಖಿಳರೂ ನಿಜವೆನಲು

ಹೊಲ ಬೇಲಿ ಮೆದ್ದರೆ ಮೊಲವೆದ್ದು ಇರಿದರೆ
ತಲೆಗೆ ತನ್ ಕೈಪೆಟ್ಟು ತಾಕಿದರೆ
ಹೆಳಲು ಹಾವಾದರೆ ಗೆಳೆಯ ರಿಪುವಾದರೆ
ಕಲಸಿಟ್ಟ ಅವಲಕ್ಕಿ ಕಲಪರಟಿ ನುಂಗಿದರೆ

ಹೆತ್ತಾಯಿ ಮಕ್ಕಳಿಗೆ ಹಿಡಿದು ವಿಷ ಹಾಕಿದರೆ
ಮತ್ತೆ ತಂದೆಯು ಹೊರಗೆ ಮಾರಿದರೆ
ತೊತ್ತು ಅರಸಿಗೆ ಪ್ರತಿ ಉತ್ತರವನಾಡಿದರೆ
ಕತ್ತಲೆಯು ಬೆನ್ನಟ್ಟಿ ಕರಡ್ಯಾಗಿ ಕಚ್ಚಿದರೆ

ಕಣ್ಣಿನೊಳಗಿನ ಬೊಂಬೆ ಕಚ್ಚಾಡ ಬಂದರೆ
ಹೆಣ್ಣಿನ ಹೋರಾಟ ಹೆಚ್ಚಾದರೆ
ಅನ್ನ ಉಣ್ಣದೆ ಬಹಳ ಅಜೀರ್ಣವಾದರೆ
ಪುಣ್ಯ ತೀರ್ಥಗಳಲ್ಲಿ ಪಾಪ ಘಟಿಸಿದರೆ

ಏರಿ ಕುಳಿತ ಕೊಂಬೆ ಎರಡಾಗಿ ಮುರಿದರೆ
ಮೇರೆ ತಪ್ಪಿ ಉದಧಿ ಮೆರೆದರೆ
ಆರಿದ್ದ ಇದ್ದಲಿಯು ಅಗ್ನಿಯಾಗುರಿದರೆ
ಧೀರ ಪುರಂದರವಿಠಲ ನಿನ್ನ ದಯ ತಪ್ಪಿದರೆ

ಆರು ಬದುಕಿದರಯ್ಯ ಹರಿ ನಿನ್ನ ನಂಬಿ


ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರು ಈ ಜಗದೊಳಗೆ ಒಬ್ಬರನು ಕಾಣೆ

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ

ಕಲಹ ಬಾರದ ಮುನ್ನ ಕರ್ಣನನು ನೀ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡುತ ಹೋಗಿ ಬಲಿಯ ತನುವನು ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯವರಿಯೆ
ದೊರೆ ಪುರಂದರವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಹುಟ್ಟಲೊಲ್ಲದು ಕೇಳೊ ಹರಿಯೆ

ಆರಿದ್ದರೇನಯ್ಯ ನೀನಿಲ್ಲದೆ


ಆರಿದ್ದರೇನಯ್ಯ ನೀನಿಲ್ಲದೆ
ಕಾರುಣ್ಯನಿಧಿ ಹರೆಯೆ ಕೈಯ ಬಿಡಬೇಡ


ದುರುಳ ಕೌರವನಂದು ದ್ರುಪದಜೆಯ ಸೀರೆಯನು
ಕರಗಳಿಂ ಸೆಳೆಯುತಿರೆ ಪತಿಗಳೆಲ್ಲ
ಗರ ಹೊಡೆದರಂತಿರ್ದರಲ್ಲದೆ ನರಹರಿಯೆ
ಕರುಣಿ ನೀನಲ್ಲದಿನ್ನಾರು ಕಾಯ್ದವರು


ಅಂದು ನೆಗಳಿನ ಬಾಧೆಯಿಂದ ಗಜ ಕೂಗಲು
ತಂದೆ ನೀ ವೈಕುಂಠದಿಂದ ಬಂದು
ಇಂದಿರೇಶನೆ ಚಕ್ರದಿಂದ ನಕ್ರನ ಬಾಯ
ಸಂದಿಯನು ಸೀಳಿ ಕೃಪೆಯಿಂದ ಸಲಹೆದೆಯೊ


ಅಜಮಿಳನು ಕುಲಗೆಡಲು ಕಾಲದೂತರು ಬಂದು
ನಿಜಸುತನ ಕರೆಯೆ ನೀನತಿವೇಗದಿ
ತ್ರಿಜಗದೊಡೆಯನೆ ಸಿರಿ ಪುರಂದರವಿಟ್ಠಲ
ನಿಜದೂತರನು ಕಳುಹಿ ಕಾಯ್ದೆ ಶ್ರೀಹರೆಯೆ

ಆರಿಗೆ ವಧುವಾದೆ ಅಂಬುಜಾಕ್ಷಿ


ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ

ಶರಧಿಬಂಧನ ರಾಮಚಂದ್ರ ಮೂರುತಿಗೋ
ಪರಮಾತ್ಮ ಸಿರಿಯನಂತಪದ್ಮನಾಭನಿಗೋ
ಸರಸಿಜನಾಭ ಜನಾರ್ದನ ಮೂರುತಿಗೋ
ಎರಡು ಹೊಳೆಯ ರಂಗಪಟ್ಟಣವಾಸಗೋ

ಚೆಲುವ ಬೇಲೂರ  ಚೆನ್ನಿಗರಾಯನಿಗೋ
ಕೆಳದಿ ಹೇಳುಡುಪಿನ ಕೃಷ್ಣರಾಯನಿಗೋ
ಇಳೆಯೊಳು ಪಂಡರಪುರನಿಲಯ ವಿಠಲೇಶಗೋ
ನಳಿನಾಕ್ಷಿ ಹೇಳು ಬದರಿ ನಾರಯಣಗೋ

ಮಲಯಜಗಂಧಿ ಬಿಂದುಮಾಧವ ರಾಯಗೋ
ಸುಲಭದ ವರ ಪುರುಷೋತ್ತಮನಿಗೋ
ಫಲದಾಯಕ ನಿತ್ಯಮಂಗಳನಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ

ವಾಸವಾರ್ಚಿತ ಕಂಚಿ ವರದರಾಜ ಮೂರುತಿಗೋ
ಅಸುರಾರಿ ಶ್ರೀಮುಷ್ಣದಾದಿ  ವರಹನಿಗೋ
ಶೇಷಶಾಯಿಯಾದ ಶ್ರಿರಂಗನಾಯಕಗೋ
ಸಾಸಿರನಾಮದೊಡೆಯ ಅಳಗಿರಿಯೀಶಗೋ

ಶರಣಾಗತರ ಪೊರೆವ ಶಾರಂಗಪಾಣಿಗೋ
ವರಗಳನೀವ ಶ್ರೀನಿವಾಸಮೂರುತಿಗೋ
ಕುರುಕುಲಾಂತಕ ರಾಜಗೊಪಾಲ ಮೂರುತಿಗೋ
ಸ್ಥಿರವಾದ ಪುರಂದರವಿಠಲರಾಯನಿಗೋ

ಆರ ಹಾರೈಸಿದರೇನುಂಟು ಬರಿ


ಆರ ಹಾರೈಸಿದರೇನುಂಟು ಬರಿ
ನೀರ ಕಡೆದರಲ್ಲೇನುಂಟು?


ಅಂತರವರಿಯದ ಅಧಮನ ಬಾಗಿಲ
ನಿಂತು ಕಾಯ್ದರಲ್ಲೇನುಂಟು
ಇಂತೆರದಲ್ಲಿಯು ಬಳಲಿಸಿ ತಾ ಯಮ-
ನಂತೆ ಕೊಲುವರಲ್ಲೇನುಂಟು ?



ಕೊಟ್ಟೆ-ಕೊಟ್ಟೆನೆಂದು ಕೊಡದುಪಚಾರದ
ಭ್ರಷ್ಟನ ಸೆರಿದರೇನುಂಟು
ಬಿಟ್ಟಿಯ ಮಾಡಿಸಿ ಬೆದರಿಸಿ ಬಿಡುವ ಕ-
ನಿಷ್ಠನ ಸೇರಿದರೇನುಂಟು



ಪಿಸುಣನ ಕುದುರೆಯ ಮುಂದೋಡಲು ಬಲು
ಬಿಸಿಲಿನ ಹಣ್ಣಲ್ಲದೇನುಂಟು
ವಸುಧೆಯೊಳಗೆ ಪುರಂದರವಿಠಲನನು ಭ-
ಜಿಸಲು ಮುಕ್ತಿಸಾಧನವುಂಟು

ಆಡ ಹೋಗೋಣ ಬಾರೋ ರಂಗ


ಆಡ ಹೋಗೋಣ ಬಾರೋ ರಂಗ 
ಓಡಿ ಹೋಗಲು ಬೇಡೋ ಕೃಷ್ಣ 

ಅಣ್ಣೆಕಲ್ಲು ಗೋಲಿ ಗಾಜುಗ 
ಚಿಣ್ಣಿಕೋಲು ಚೆಂಡು ಬುಗುರಿ 
ಕಣ್ಣುಮುಚ್ಚಾಲೆ ಹಲವು ಕೂಟ 
ಬಣ್ಣದಾಟಗಳನೆಲ್ಲ

ಸೋಲು-ಗೆಲುವಿಗೆಲ್ಲ ನೀನು
ಬಾಲಕರೊಳು ಕೂಡಿಕೊಂಡು 
ಮೇಲೆ ಮಮತೆಯಿಂದ ಸಾನು-
ಕೂಲವಾಗಿ ನಡಸುವಂತೆ 

ಪುಟ್ಟ ಪುಟ್ಟ ಕೊಳಲು ಕಂಬಳಿ 
ಕಟ್ಟಿ ಬುತ್ತಿ ಕೈಯಲಿ ಕೋಲು 
ದಿಟ್ಟ ಚೆಲುವನಾದ ಪುರಂದರ 
ವಿಠಲ ಗೋವಳರ ರಾಯ 

ಆಡಹೋಗಲು ಬೇಡವೋ ರಂಗಯ್ಯ


ಆಡಹೋಗಲು ಬೇಡವೋ ರಂಗಯ್ಯ
ಬೇಡಿಕೊಂಬೆನೊ ನಿನ್ನ

ಗಾಡಿಗಾತಿಯರ ಕೂಡಾಡಿ  ಕೆಡಲು ಬೇಡ
ಕಾಡುವರೊ ನಿನ್ನನು ಮುಕುಂದ

ನೀರೊಳು ಮುಳುಗೆಂಬರೋ ಬೆನ್ನಿನ ಮೇಲೆ
ಭಾರವ ಹೊರಿಸುವರೋ
ಕೋರೆದಾಡೆಯ ಮುದ್ದಾಡಿ ಸೋಲಿಸುವರೋ
ಕರುಳಹಾರ ಕೊರಳನೆಂಬರೋ

ಪುಟ್ಟ ರೂಪನೆಂಬರೋ  ಅಣ್ಣಯ್ಯ
ಕೊಡಲಿ ಪಿಡಿದನೆಂಬರೋ
ಹಣೆಗಣ್ಣ ರುದ್ರನ ವರವುಳ್ಳ ದಶ-
ಕಂಠನ ಕೊಂದವನೆಂಬರೋ

ಬೆಣ್ಣೆ ಕಳ್ಳನೆಂಬರೋ ಹೆಂಗಳನೆಲ್ಲ
ಭಂಗ ಮಾಡಿದನೆಂಬರೋ
ಪುಟ್ಟ ಕುದುರೆಯನೇರಿ ಕಲ್ಕಿ ರೂಪನಾಗಿ
ಪುರಂದರವಿಠಲ ಬಾ ಎಂಬರೋ

ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ


ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ

ಪುಟ್ಟಿದೇಳು ದಿವಸದಲಿ  ದುಷ್ಟ ಪೂತನಿಯ ಕೊಂದೆ
ಮುಟ್ಟಿ ವಿಷದ ಮೊಲೆಯುಂಡ ಕಾರಣ
ದೃಷ್ಟಿ ತಾಕಿತೆ ನಿನಗೆ ರಂಗಯ್ಯ

ಬಾಲಕತನದಿ ಗೋಪಾಲಕರೊಡಗೂಡಿ
ಕಾಳಿಂದಿ ಮಾಡುವನು ಕಲಕಿದ ಕಾರಣ
ಕಾಲು ಉಳುಕಿತೆ ನಿನಗೆ ರಂಗಯ್ಯ

ತುರುವ ಕಾಯಲು ಪೋಗೆ ಭರದಿ ಇಂದ್ರ ಮಳೆಗರೆಯೆ
ಬೆರಳಲಿ ಬೆಟ್ಟವನೆತ್ತಿದ ಕಾರಣ
ಬೆರಳು ಉಳುಕಿತೆ ನಿನಗೆ ರಂಗಯ್ಯ

ವಾಸುದೇವ ಸುತನಾಗಿ ಅಸುರರೆಲ್ಲರ ಮಡುಹಿ
ಹೆಸರಿನ ಮಲ್ಲರ ಮಡುಹಿದ ಕಾರಣ
ಕಿಸಿರು ತಾಕಿತೆ ನಿನಗೆ ರಂಗಯ್ಯ

                                                                                                      ಶರಣು ವೇಲಾಪುರದ ಚೆಲುವ ಚೆನ್ನಿಗರಾಯ
                                                                                                      ಪರಿಪರಿ ವಿಧದಿಂದ ಶರಣರ ಪೊರೆಯುವ
                                                                                                      ವರದ ಪುರಂದರವಿಠಲರಾಯ

ಅಮ್ಮ ನಿಮ್ಮ ಮನೆಗಳಲ್ಲಿ


ಅಮ್ಮ ನಿಮ್ಮ ಮನೆಗಳಲ್ಲಿ 
ನಮ್ಮ ರಂಗನ ಕಂಡಿರೇನೆ

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು 
ಪೂಸಿದ ಶ್ರೀಗಂಧ ಮೈಯೊಳಗಮ್ಮ
ಲೇಸಾಗಿ ತುಲಸಿಯ ಮಾಲೆಯ ಹಾಕಿದ 
ವಾಸುದೇವನು ಬಂದ ಕಂಡಿರೇನೆ 

ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ 
ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ 
ಅರಳೆಲೆ ಕನಕದ ಕುಂಡಲ ಕಾಲಂದಿಗೆ 
ಉರಗಶಯನ ಬಂದ ಕಂಡಿರೇನೆ 

ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ
ನೀಲವರ್ಣನು ನಾಟ್ಯವಾಡುತಲಿ
ಮೇಲಾಗಿ ಬಾಯಲ್ಲಿ ಜಗವನು ತೋರಿದ 
ಮೂರ್ಲೋಕದೊಡೆಯನ ಕಂಡಿರೇನೆ


ಕುಂಕುಮ ಕಸ್ತೂರಿ ಕುಡಿಕುಡಿ ನಾಮವು 
ಶಂಕಚಕ್ರಂಗಳ ಧರಿಸಿಹನಮ್ಮ 
ಬಿಂಕದಿಂದಲಿ ಕೊಳಲೂದುತ ಪಾಡುತ 
ಪಂಕಜಾಕ್ಷನು ಬಂದ ಕಂಡಿರೇನೆ 

ಹದಿನಾರು ಸಾವಿರ ಗೋಪಿಯರೊಡಗೂಡಿ
ಚದುರಂಗ ಪಗಡೆಯನಾಡುವನಮ್ಮ
ಮದನ ಮೋಹನರೂಪ ಎದೆಯಲಿ 
ಪದುಮನಾಭಾನು  ಬಂದ ಕಂಡಿರೇನೆ 

ನೊಸಲ ಸುತ್ತಿದ ಪಟ್ಟಿ ನಡುವಿನ ವಡ್ಯಾಣ
ಎಸೆವ ಕಸ್ತೂರಿ ಬಟ್ಟು ಮೈಯವನಮ್ಮ 
ಪಸರಿಸಿ ಪಟ್ಟಿಯ ಹಾವಿಗೆ ಮೆಟ್ಟಿದ 
ಅಸುರಾಂತಕ ಬಂದ ಕಂಡಿರೇನೆ 

ತೆತ್ತೀಸಕೋಟಿ ದೇವರ್ಕಳ ಒಡಗೂಡಿ 
ಹತ್ತವತಾರವನೆತ್ತಿದನೆ
ಭಕ್ತವತ್ಸಲ ನಮ್ಮ ಪುರಂದರವಿಠಲ
ನಿತ್ಯೋತ್ಸವ ಬಂದ ಕಂಡಿರೇನೆ 

ಅಪಾಯಕೋಟಿಗಳಿಗೆ ಉಪಾಯ ಒಂದೇ


ಅಪಾಯಕೋಟಿಗಳಿಗೆ ಉಪಾಯ ಒಂದೇ 
ಹರಿಭಕ್ತರು ತೋರಿಕೊಟ್ಟ ಉಪಾಯ ಒಂದೇ 
ಪುರಂದರ ವಿಠಲನೆಂದು ಭೋರಿಟ್ಟು 
ಕರೆವ ಉಪಾಯವೊಂದೆ 

ಅನ್ಯಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ


ಅನ್ಯಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ
ತನ್ನ ಸತಿಯರೊಲುಮೆಗೊಲಿದು ತಾನು ಸುಖಿಸಬಾರದೆ

ಮಿಂದು ಮಲವನ್ನ ಬಿಡಿಸಿ ಮೇಲುವಸ್ತ್ರವ ತೊಡಿಸಿ
ಅಂದವಾದ ಆಭರಣವಿತ್ತು ಅರ್ತಿಯಿಂದ ನೋಡುತ
ಗಂಧ ಕಸ್ತೂರಿ ಪುನುಗು ಪೂಸಿ ಗಮಕದಿಂದ ಹೂವ ಮುಡಿಸಿ
ಸಂಕ್ಷಮದಿ ಸಂತೋಷ ಪಡುವ ಸುಖವು ತನಗೆ ಸಾಲದೆ

ಪೊಂಬಣ್ಣ ಎಸೆವ ಮೈಯದರೊಳು ಒಲಿವ ಕುಚಕ್ಕೆ ಕೈಯನಿಟ್ಟು
ಕಂಬುಕಂದರವ ನೋಡಿ ಕಸ್ತೂರಿನಿಟ್ಟು  ಮುಟ್ಟಿಸುತ
ಹಂಬಲಿಸಿ ಸತಿಯ ನೋಡಿ ಹಲವು ಬಂಧನದಿಂದ ಕೂಡಿ
ಸಂಕ್ಷಮದಿ ಸಂತೋಷ ಪಡುವ ಸುಖವು ತನಗೆ ಸಾಲದೆ

ಸತಿಪತಿಯು ಏಕವಾಗಿ ಸರ್ವಜನರ ಹಿತವ ಚಿಂತಿಸಿ
ಅತಿಥಿಯನ್ನ ಪೂಜೆಮಾಡಿ ಒಂದೆನ್ನಿಸಿಕೊಲ್ಲುತ
ಕ್ಷಿತಿಯೊಳಧಿಕ ಗುರು ಪುರಂದರವಿಠಲನ್ನ ಪಾದವನು ಸ್ಮರಿಸಿ
ಸತಿಸುತರು ಹಿತರು ನೀವು ಸುಖದಿಂದ ಆಳಿರೋ