ಅನುದಿನದಲಿ ಬಂದು ತನುವ ಸ್ನೇಹವ ಮಾಡಿ


ಅನುದಿನದಲಿ ಬಂದು ತನುವ ಸ್ನೇಹವ ಮಾಡಿ
ಎನ್ನ ಬಿಟ್ಟು ಹೋಗುತೀಯಾ ಜೀವವೆ


ಬೆಲ್ಲದ ಹೇರಿನಂತೆ ಬೇಕಾದ ಬಂಧು ಬಳಗ
ನಿಲ್ಲೊ ಮಾತ ಹೇಳುತೇನೋ ಜೀವವೆ
ನಿಲ್ಲಲೀಸದೆ ನಿನ್ನ ಯಮನವರೆಳೆದೊಯ್ವಾಗ
ಬೆಲ್ಲ ಬೇವಾಯಿತಲ್ಲೋ ಕಾಯವೆ


ಸಕ್ಕರೆ ಪಾಯಸ ಸವಿದುಂಬ ಕಾಲದಲ್ಲಿ
ದಿಕ್ಕುಗೆಟ್ಟು ಹೋಗುತಿಯಾ ಜೀವವೇ
ದಕ್ಕಗೊಡದೆ ಎನ್ನ ಯಮನವರೆಳೆದೊಯ್ವಾಗ
ಸಕ್ಕರೆ ವಿಷವಾಯಿತಲ್ಲೋ ಕಾಯವೆ


ಸೋರುವ ಮನೆಯಲಿ ಧ್ಯಾನ ಮೌನಾದಿಗಳು
ಬೇರಿತ್ತು ನಿನ್ನ ಮನಸು ಜೀವವೇ
ನೀರಮೇಲಣ ಗುಳ್ಳೆ ತೋರಿ ಹಾರಿದಂತೆ
ಯಾರಿಗೆ ಯಾರಿಲ್ಲ ಕಾಯವೆ


ಅಂದಣದೈಶ್ವರ್ಯ ದಂಡಿಗೆ ಪಲ್ಲಕ್ಕಿ
ಮಂದಗಮನೆಯರು ಜೀವವೆ
ಮಂದಗಮನೆ ಯಾರೊ ಮಡದಿ ಮಕ್ಕಳು ಯಾರೊ
ಬಂದಂತೆ ಹೋಗುತೇನೋ ಕಾಯವೆ


ಹುಟ್ಟಿದ್ದು ಹೊಲೆಯೂರು ಬೆಳೆದದ್ದು ಮೊಲೆಯೂರು
ಇಟ್ಟದ್ದು ಈ ಊರು ಎತ್ತಿದ್ದು ಕಾಡೂರು
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ
ಮುಟ್ಟಿ ಭಜಿಸು ಕಂಡ್ಯ ಕಾಯವೆ

ಅನುಗಾಲವು ಚಿಂತೆ ಜೀವಕ್ಕೆ


ಅನುಗಾಲವು ಚಿಂತೆ ಜೀವಕ್ಕೆ ತನ್ನ
ಮನವು ಶ್ರೀರಂಗನೊಳ್ ಮೆಚ್ಚುವ ತನಕ


ಸತಿಯು ಇದ್ದರು ಚಿಂತೆ ಸತಿಯು ಇಲ್ಲದ ಚಿಂತೆ
ಮತಿಹೀನೆ ಸತಿಯಾದರು ಚಿಂತೆಯು
ಪೃಥಿವಿಯೊಳಗೆ ಸತಿ ಅತಿ ಚೆಲ್ವೆಯಾದರೆ
ಮಿತಿ ಮೇರೆಯಿಲ್ಲದ ಮೋಹದ ಚಿಂತೆ


ಪುತ್ರರಿದ್ದರು ಚಿಂತೆ ಪುತ್ರರಿಲ್ಲದ ಚಿಂತೆ
ಅತ್ತು ಅನ್ನಕೆ ಕಾಡುವ ಚಿಂತೆಯು
ತುತ್ತಿನ ಆಸೆಗೆ ತುರುಗಳ ಕಾಯ್ದರು
ಸುತ್ತೇಳು ಕಡೆಯಿಲ್ಲದ ಚಿಂತೆಯು


ಬಡವನಾದರು ಚಿಂತೆ ಬಲಿದನಾದರು ಚಿಂತೆ
ಹಿಡಿ ಹೊನ್ನು ಕೈಯೊಳಿದ್ದರು ಚಿಂತೆಯು
ಪೊಡವಿಯೊಳಗೆ ಸಿರಿ ಪುರಂದರವಿಠಲನ
ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ