ಮಣ್ಣಿಂದ ಕಾಯ ಮಣ್ಣಿಂದ



ಮಣ್ಣಿಂದ ಕಾಯ ಮಣ್ಣಿಂದ



ಮಣ್ಣಿಂದ ಸಕಲ ದೇಶಗಳೆಲ್ಲ
ಮಣ್ಣಿಂದ ಸಕಲ ವಸ್ತುಗಳೆಲ್ಲ
ಮಣ್ಣ ಬಿಟ್ಟವರಿಗೆ ಆಧಾರವಿಲ್ಲ
ಅಣ್ನಗಳಿರೆಲ್ಲರು ಕೇಳಿರಯ್ಯ



ಅನ್ನ ಉದಕ ಊಟವೀಯೋದು ಮಣ್ಣು
ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು
ಉನ್ನತವಾದ ಪರ್ವತವೆಲ್ಲ ಮಣ್ಣು
ಕಣ್ಣು ಮೂರುಳ್ಳನ ಕೈಲಾಸ ಮಣ್ಣು



ದೇವರ ಗುಡಿ ಮಠ ಮನೆಯೆಲ್ಲ ಮಣ್ಣು
ಆವಾಗ ಆಡುವ್ ಮಡಕೆಯು ತಾ ಮಣ್ಣು
ಕೋವಿದರಸರ ಕೋಟೆಗಳೆಲ್ಲ ಮಣ್ಣು
ಪಾವನ ಗಂಗೆಯ ತಡಿಯೆಲ್ಲ ಮಣ್ಣು



ಭತ್ತಭರಣ ಧಾನ್ಯ ಬೆಳೆಯುವುದೆ ಮಣ್ಣು
ಸತ್ತವರನು ಹೂಳಿಸಿಡುವದೆ ಮಣ್ಣು
ಉತ್ತಮವಾದ ವೈಕುಂಠವೇ ಮಣ್ಣು
ಪುರಂದರವಿಠಲನ್ನ ಪುರವೆಲ್ಲ ಮಣ್ಣು

ಕಂಡೆ ಕರುಣಾನಿಧಿಯ


ಕಂಡೆ ಕರುಣಾನಿಧಿಯ ಗಂಗೆಯ
ಮಂಡೆಯೊಳಿಟ್ಟ ದೊರೆಯ ಶಿವನ

ರುಂಡಮಾಲೆ ಸಿರಿಯನೊಸಲೊಳು
ಕೆಂಡಗಣ್ಣಿನ ಬಗೆಯ ಹರನ

ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿಸುತ ಸರ್ಪಭೂಷಣ ಶಿವನ ಹರನ

ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ
ಪಶುಪತಿಯಿನಿಸುವವ ವಸುಧೆಯೋಳ್ ಶಶಿಶೇಖರ ಶಿವನ ಹರನ

ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ
ತ್ರಿಜಗನ್ಮೋಹಕನ ತ್ರಿಲೋಚನ ತಿಪುರಾಂತಕ ಶಿವನ ಹರನ

ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ
ರಾಮನಾಮಸ್ಮ್ರರನ ರತಿಪತಿ ಕಾಮನ ಸಂಹರನ ಶಿವನ

ಧರೆಗೆ ದಕ್ಷಿಣಕಾಶಿ ಎನಿಸುವ ಪುರಪಂಪಾವಾಸಿ
ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ