ಗಜವದನ ಬೇಡುವೆ ಗೌರೀತನಯ


ಗಜವದನ ಬೇಡುವೆ ಗೌರೀತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ

ಪಾಶಾಂಕುಶಧರ ಪರಮಪವಿತ್ರ
ಮೂಷಕವಾಹನ ಮುನಿಜನ ಪ್ರೇಮ

ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ

ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ದಯಮಾಡೋ

ಗಿಳಿಯು ಪಂಜರದೊಳಿಲ್ಲ ಶ್ರೀರಾಮ ರಾಮ



ಗಿಳಿಯು ಪಂಜರದೊಳಿಲ್ಲ ಶ್ರೀರಾಮ ರಾಮ
ಬರಿದೆ ಪಂಜರವಾಯಿತಲ್ಲ

ಅಕ್ಕ ಕೇಳೆ ಎನ್ನ ಮಾತು
ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಾನಿಲ್ಲದ ವೇಳೆ
ಬೆಕ್ಕು ಕೊಂಡು ಹೋಯಿತಯ್ಯೊ

ಅರ್ಥಿಲೊಂದು ಗಿಳಿಯ ಸಾಕಿ
ಮುತ್ತಿನ್ಹಾರವನ್ನು ಹಾಕಿದೆ
ಮುತ್ತಿನ್ಹಾರ ಕೊಂಡು ಗಿಳಿಯು
ಎತ್ತಲ್ಹಾರಿ ಹೋಯಿತಯ್ಯೊ

ಹಸುರು ಬಣ್ನದ ಗಿಳಿಯು
ಕುಶಲ ಬುದ್ದಿಯ್ ಗಿಳಿಯು
ಅಸುವು ಗುಂದಿ ಮರಿಯು ತಾನು
ಹಸನಗೆಡಿಸಿ ಹೋಯಿತಯ್ಯೊ

ರಾಮ ರಾಮ ಎಂಬ ಗಿಳಿ
ಕೋಮಲ ಕಾಯದ ಗಿಳಿ
ಸಾಮಜ ಪೋಷಕ ತನ್ನ
ಪ್ರೇಮದಿ ಸಾಕಿದ ಗಿಳಿ

ಒಂಬತ್ತು ಬಾಗಿಲ ಮನೆಯೋಳ್
ತುಂಬಿದ ಸಂದಣಿ ಇರಲು
ಕಂಭ ಮುರಿದು ಡಿಂಬ ಬಿದ್ದು
ಅಂಬರಕ್ಕೆ ಹಾರಿ ಹೋಯಿತು

ಮುಪ್ಪಾಗದ ಬೆಣ್ಣೆ ತಿಂದು
ತಪ್ಪದೆ ಹಾಕಿದ ಹಾಲ
ಒಪ್ಪದಿಂದ ಕುಡಿದು ಕೈ-
ತಪ್ಪಿ ಹಾರಿಹೋಯಿತಯ್ಯೋ

ಅಂಗೈಲಾಡುವ ಗಿಳಿ
ಮುಂಗೈ ಮೇಲಣ ಗಿಳಿ
ರಂಗ ಪುರಂದರವಿಠಲನ್ನ
ಅಂಗಣದೊಳಾಡುವ ಗಿಳಿ

ಗುಣವಾಯಿತೆನ್ನ ಭವರೋಗ


ಗುಣವಾಯಿತೆನ್ನ ಭವರೋಗ
ಕೃಷ್ಣನೆಂಬ ವೈದ್ಯನು ದೊರಕಿದನು
ಗುಣವಾಗುವವರಿಗೆ ಎಣೆಯಿಲ್ಲ
ಗುಣವಂತರಾಗುವರು ಭವವೆಲ್ಲ

ಸಂತತ ಹರಿಭಕ್ತಿಯನುಪಾನ
ಸಂತತ ಗುರುಭಕ್ತಿ ಮರುಪಾನ
ಸಂತತ ಶ್ರವಣ ಕಠಿಣ ಪಥ್ಯ
ಸಂತತ ಕೀರ್ತನ ಉಷ್ಣೋದಕ

ಚಂದ್ರೋದಯ ಉಂಟು ಈತನಲಿ
ಚಿಂತಾಮಣಿಯುಂಟು ಈತನಲಿ
ಸಂಚಿಯೊಳಗೆ ತುಂಬ ಮಾತ್ರೆಗಳುಂಟು
ಚಿನ್ನಾಗಿ ಗುಣಮಾಡುವನೀತ

ಗುರುಸ್ಮರಣೆಯು ಶುಂಠಿ ಮೆಣಸು
ಹರಿದಿವ್ಯನಾಮವು ಸಾರನ್ನ
ಗುರುಪಾದಸೇವೆಯು ಸಿಹಿ ಸಾರು
ಹರಿಪಾದೋದಕವೇ ಘೃತವು

ಸಹಸ್ರನಾಮದಿ ತಾ ವಂದ್ಯ
ಸಕಲ ಸ್ವತಂತ್ರಕೆ ತಾ ಬಾಧ್ಯ
ಹರಿಸರ್ವೋತ್ತಮನೆಂಬ ವೈದ್ಯ
ಪುರಂದರವಿಠಲನೆ ನಿಜವೈದ್ಯ

ಗುರುರಾಯರ ನಂಬಿರೊ ಮಾರುತಿಯೆಂಬ


ಗುರುರಾಯರ ನಂಬಿರೊ ಮಾರುತಿಯೆಂಬ
ಗುರುರಾಯರ ನಂಬಿರೊ

ಗುರುರಾಯರ ನಂಬಿ ಬಿಡದೆ ಯಾವಾಗಲು
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ

ವನಧಿಯ ಮನೋವೇಗದಿ ಲಂಘಿಸಿ ಮಹಿ-
ತನುಜೆ ಶೋಕವ ತರಿದು
ವನವ ಬೇರೊಡನೆ ಕಿತ್ತೀಡಾಡಿ ಎದುರಾದ
ದನುಜರ ಸದೆದು ಲಂಕೆಯ ತನ ಸಖಗಿತ್ತ

ಕೌರವ ಬಕ ಹಿಡಿಂಬ ಕೀಚಕರೆಂಬ
ದುರುಳ ಸಂತತಿ ನೆಗ್ಗೊತ್ತಿ
ಘೋರಪಾತಕಿ ದುಶ್ಯಾಸನನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ

ಜೀವೇಶರೊಂದೆಂಬುವ ದುರ್ವಾದಿಯ ಅ-
ಭಾವ ಶಾಸ್ತ್ರಗಳೋಡಿಸಿ
ಕೋವಿದರಿಗೆ ಸದ್ಭಾಷ್ಯವ ತೋರಿದ
ದೇವ ಪುರಂದರವಿಠಲ ಸೇವಕರಾದ

ಗೋಪಿಯ ಭಾಗ್ಯವಿದು ಶ್ರೀಪತಿ


ಗೋಪಿಯ ಭಾಗ್ಯವಿದು
ಶ್ರೀಪತಿ ತಾ ಶಿಶುರೋಪಿನಲಿರುವುದು

ಕಡು ಮುದ್ದು ರಂಗನ ತೊಡೆಯಮೇಲೆತ್ತುತ್
ಜಡೆಯ ಹೆಣೆದು ಹೂ ಮುಡಿಸಿ ಬೇಗ
ಬಿಡದೆ ಮುತ್ತಿನ ಚೆಂದರಳೆಲೆಯನು
ಸಡಗರದಿಂದ ಅಲಂಕರಿಸಿದಳು

ನಿತ್ಯನಿರ್ಮಲನಿಗೆ ನೀರನೆರೆದು ತಂ-
ದೆತ್ತಿ ತೊಡೆಯೊಳಿಟ್ಟು ಮೊಲೆಯೂಡಿ
ಮುತ್ತುಕೊಟ್ಟು ಬಲು ವಿಧದಿಂದಾಡಿಸಿ
ಅರ್ಥಿಯಿಂದಲಿ ತಾ ತೂಗಿದಳು

ದೃಷ್ಟಿ ತಾಕೀತೆಂದಿಟ್ಟು ವಿಭೂತಿಯ
ತಟ್ಟೆಯೊಳಾರತಿಗಳ ಬೆಳಗಿ
ಥಟ್ಟನೆ ಉಪ್ಪು ಬೇವು ನಿವಾಳಿಸಿ
ತೊಟ್ಟಿಲೊಳಿಟ್ಟು ತಾ ತೂಗಿದಳು

ಎನ್ನಯ ರನ್ನನೆ ಸುಮ್ಮನಿರೋ ದೊಡ್ಡ
ಗುಮ್ಮನು ಬರುವನು ಅಳಬೇಡ
ಸುಮ್ಮನೆ ಇರು ನಿನಗಮ್ಮಿ ಕೊಡುವೆನೆಂದು
ಬೊಮ್ಮನ ಪಿತನ ತಾ ತೂಗಿದಳು

ಮಾಧವ ಜೋ ಮಧುಸೂದನ ಜೋ ಜೋ
ಯಾದವ ರಾಯ ಶ್ರೀರಂಗನೆ ಜೋ
ಆದಿಮೂರುತಿ ನಮ್ಮ ಪುರಂದರವಿಠಲನ
ಆದರದಿಂದ ತಾ ತೂಗಿದಳು